ಕಳಸ:ಅರಣ್ಯ ಇಲಾಖೆ ವಿರುದ್ಧ ಕುದುರೆಮುಖಲ್ಲಿ ಇಂದು ರೈತರು, ರೈತ ಸಂಘದ ಹಸಿರು ಸೇನೆ ಮತ್ತು ಇತರೆ ಮುಖಂಡರು ಕಿಡಿ ಕಾರಿದರು. ಕುದುರೆಮುಖ ಆಸುಪಾಸಿನ ಕೆಲ ಕೃಷಿಕರಿಗೆ ನೀಡಿರುವ ನೋಟಿಸ್ ಖಂಡಿಸಿ ಕುದುರೆಮುಖದಲ್ಲಿ ಗುರುವಾರ ರೈತ ಸಂಘದ ಹಸಿರುಸೇನೆ ಘಟಕ ಪ್ರತಿಭಟನೆ ನಡೆಸಿತು. ಈ ಪ್ರತಿಭಟನೆಗೆ ನಿರೀಕ್ಷೆಗೂ ಮೀರಿ ಜನ ಬೆಂಬಲ ಕಂಡು ಬಂತು.
ವಿವಿಧ ಸಂಘಟನೆಗಳ ಮುಖಂಡರಾದ ಕೃಷ್ಣೇಗೌಡ, ಕನ್ನಡ ರಾಜು, ನಾಗೇಶ್ ಗೌಡ, ಶ್ರೀನಿವಾಸ್, ಜಯಂತ್ಗೌಡ, ಪಂಚಾಯಿತಿ ಸದಸ್ಯರಾದ ಶಂಕರೇಗೌಡ, ಮಮತಾ, ಶಾಂತಾ, ಉದಯ್, ಕೆಂಗನಕೊಂಡ, ಕುಚಗೇರಿ, ಬಿಳಗಲ್, ಬಸರೀಕಲ್ಲು, ನೆಲ್ಲಿಬೀಡು, ಬಲಿಗೆ, ಹೊರನಾಡು, ಕಳಸ, ಕಾರಗದ್ದೆ ಪ್ರದೇಶದ ನೂರಾರು ರೈತರು ಮತ್ತು ರೈತ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.
ಗುರುವಾರ ಬೆಳಿಗ್ಗೆ ಕಳಸ ತಾಲ್ಲೂಕಿನ ವಿವಿಧೆಡೆಯಿಂದ ಬಂದಿದ್ದ ರೈತರು ಮತ್ತು ರೈತ ಸಂಘದ ಸದಸ್ಯರು ಕುದುರೆಮುಖ ವಲಯ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು. ರೈತರ ಕೃಷಿ ಭೂಮಿ ಖುಲ್ಲಾ ಮಾಡುವ ಯತ್ನವನ್ನು ಅರಣ್ಯ ಇಲಾಖೆ ಕೈಬಿಡಬೇಕು. ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಬರುವವರೆಗೂ ಕದಲುವುದಿಲ್ಲ ಎಂದು ರೈತರು ಹಠ ಮಾಡಿದರು.

ಧರಣಿ ಸ್ಥಳದಿಂದ ಕೃಷಿಕರು ತೆರಳುವ ಲಕ್ಷಣ ಕಂಡು ಬರಲಿಲ್ಲ. ಅರಣ್ಯ ಇಲಾಖೆ ವಿರುದ್ಧ ಕೋಪ ಹೊರಹಾಕುತ್ತಾ ಸ್ಥಳೀಯರು ಭುಸುಗುಡುತ್ತಲೇ ಇದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನದ ಡಿಎಫ್ಓ ಶಿವರಾಮ್ ಮತ್ತು ಎಸಿಎಫ್ ಸತೀಶ್ ಬಂದ ನಂತರ ಪ್ರತಿಭಟನಾಕಾರರು ತಮ್ಮ ಅಸಮಾಧಾನ ಹೊರಹಾಕಿದರು.
ರಾಷ್ಟ್ರೀಯ ಉದ್ಯಾನದೊಳಗಿನ ರೈತರ ಕೃಷಿ ಜಮೀನಿನ ಹಕ್ಕುಗಳ ಬಗ್ಗೆ ಅರಣ್ಯ ಇಲಾಖೆಯ ಜೊತೆ ಈಗಾಗಲೇ ಹಲವಾರು ಬಾರಿ ಮಾತುಕತೆ ನಡೆದಿದೆ.ಆದರೆ ಅರಣ್ಯ ಸಚಿವರ ತರಾತುರಿಯ ಹೇಳಿಕೆಯಿಂದಾಗಿ ನಮಗೆಲ್ಲ ತೆರವು ನೋಟಿಸ್ ಕೊಟ್ಟಿರುವುದು ತಪ್ಪು ಎಂದು ಪ್ರತಿಭಟನಾಕಾರರ ಪರವಾಗಿ ಸುರೇಶ್ ಭಟ್ ಹೇಳಿದರು.
ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಮತ್ತು ಕೃಷಿಕರ ಒತ್ತುವರಿ ಭೂಮಿ ತೆರವು ಮಾಡಿಸುವಲ್ಲಿ ಸರ್ಕಾರದ ಮೇಲೆ ಪ್ರಭಾವ ಬೀರುತ್ತಿರುವುದು ಸರ್ಕಾರೇತರ ಸಂಸ್ಥೆಗಳು. ಅವರು ನೀಡುವ ತಪ್ಪು ಮಾಹಿತಿಯಿಂದಾಗಿ ಕೃಷಿಕರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಮುಖಂಡರಾದ ಕೆ.ಸಿ.ಧರಣೇಂದ್ರ, ಜ್ವಾಲನಯ್ಯ ಅಭಿಪ್ರಾಯಪಟ್ಟರು.

ಸರ್ಕಾರೇತರ ಸಂಸ್ಥೆಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೆ ಕಾಲಿಡಲು ಬಿಡಬಾರದು ಎಂದು ರಾಮಪ್ರಕಾಶ್ ಆಗ್ರಹಿಸಿದರು.ರೈತರ ಕೃಷಿ ಭೂಮಿ ಖುಲ್ಲಾ ಮಾಡುವ ಯತ್ನವನ್ನು ಅರಣ್ಯ ಇಲಾಖೆ ಮಾಡಿದರೆ ರಕ್ತಪಾತ ಆಗುತ್ತದೆ ಎಂದು ರೈತ ಸಂಘದ ಸವಿಂಜಯ ಎಚ್ಚರಿಸಿದರು.
ಕುದುರೆಮುಖ ಉದ್ಯಾನದ ರೈತರ ಎಲ್ಲ ಸಮಸ್ಯೆ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ.ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಡಿಎಫ್ಓ ಶಿವರಾಮ್ ಭರವಸೆ ನೀಡಿದರು.
ರೈತರನ್ನು ಒಕ್ಕಲೆಬ್ಬಿಸಬಾರದು, ಕುದುರೆಮುಖದಲ್ಲಿ ಇರುವ ಕಂದಾಯ ಭೂಮಿಯನ್ನು ಅರಣ್ಯವನ್ನಾಗಿ ಪರಿವರ್ತಿಸಿ ಸಂಸೆ ಗ್ರಾಮದ ಸರ್ವೆ ನಂಬರ್ 183ರಲ್ಲಿ ಕೃಷಿ ಮಾಡಿರುವ ಕೃಷಿಕರ ಭೂಮಿಗೆ ಪಹಣಿ ಪಟ್ಟಾ ನೀಡಬೇಕು ಎಂಬ ಆಗ್ರಹವಿದ್ದ ಮನವಿ ಸಲ್ಲಿಸಲಾಯಿತು. ಕಸ್ತೂರಿ ರಂಗನ್ ವರದಿ ಜಾರಿ ಮಾಡಬಾರದು.ಉದ್ಯಾನ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಕ್ಕೆ ಅರಣ್ಯ ಇಲಾಖೆ ಅಡ್ಡಿ ಮಾಡಬಾರದು. ಉದ್ಯಾನದಲ್ಲಿ ಜನರ ಸಹಕಾರದಿಂದ ಪ್ರಾಣಿ ಮತ್ತು ಸಸ್ಯ ವೈವಿಧ್ಯತೆ ಉಳಿಸಿಕೊಳ್ಳಬೇಕು ಎಂಬುದು ಇತರೆ ಬೇಡಿಕೆಗಳಾಗಿದ್ದವು.
