ಕಳಸ:ಮಲೆನಾಡಿನ ಕೃಷಿಕರ ಸಾಗುವಳಿ ಭೂಮಿ ಖುಲ್ಲಾ ಮಾಡುವ ಅರಣ್ಯ ಇಲಾಖೆ ಪ್ರಯತ್ನದ ವಿರುದ್ಧ ಭಾರಿ ಹೋರಾಟ ಸಂಘಟನೆ ಆಗುತ್ತಿದೆ.ಕೊಪ್ಪ, ಚಿಕ್ಕಮಗಳೂರಿನಲ್ಲಿ ನಡೆದ ಭಾರಿ ಪ್ರತಿಭಟನೆ ನಂತರ ಇದೇ 11ರಂದು ಬೆಳೆಗಾರ ಸಂಘಟನೆಗಳು ಕಳಸ ಬಂದ್ ಮಾಡಿ ಪ್ರತಿಭಟನೆ ನಡೆಸಲಿವೆ.
ಕಳಸ ಮತ್ತು ಬಾಳೂರು ಹೋಬಳಿ ಕಾಫಿ ಬೆಳೆಗಾರರ ಸಂಘ, ಕರ್ನಾಟಕ ಬೆಳೆಗಾರರ ಒಕ್ಕೂಟ ಮತ್ತು ಕಳಸ ತಾಲ್ಲೂಕು ಒತ್ತುವರಿ ಹೋರಾಟ ಸಮಿತಿ, ಕಳಸದ ಬಹುತೇಕ ರಾಜಕೀಯ ಪಕ್ಷಗಳು ಮತ್ತು ಇತರೆ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಈ ಚಳವಳಿ ನಡೆಯಲಿದೆ.
ಮಲೆನಾಡಿನಲ್ಲಿ ಸರ್ಕಾರಿ ಭೂಮಿ ಸಾಗುವಳಿದಾರರಿಗೆ ಈಗಾಗಲೇ ನೋಟಿಸ್ ನೀಡಲಾಗುತ್ತಿದ್ದು ಭೂಮಿ ಖುಲ್ಲಾ ಮಾಡುವ ಯತ್ನ ಆರಂಭವಾಗಿದೆ.ಇದರಿಂದ ದೊಡ್ಡ ಸಂಖ್ಯೆಯ ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರು ಚಿಂತಿತರಾಗಿದ್ದಾರೆ.ಅನೇಕ ವಾಸದ ಮನೆಗಳು ಕೂಡ ಸರ್ಕಾರಿ ಜಮೀನಿನಲ್ಲೇ ಇದೆ ಎಂದು ಹೋರಾಟ ಸಂಘಟಿಸುತ್ತಿರುವ ಜಿ.ಕೆ.ಮಂಜಪ್ಪಯ್ಯ ತಿಳಿಸಿದ್ದಾರೆ.
15 ಲಕ್ಷ ಎಕರೆ ಸರ್ಕಾರಿ ಜಮೀನನ್ನು ಸಾಗುವಳಿದಾರರಿಗೆ ಮಂಜೂರು ಮಾಡಬೇಕು.ಕಸ್ತೂರಿರಂಗನ್ ವರದಿ ತಿರಸ್ಕರಿಸಬೇಕು.ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದು 25 ವರ್ಷ ಸಾಗುವಳಿ ಮಾಡಿದವರಿಗೂ ಹಕ್ಕು ನೀಡಬೇಕು.ವನ್ಯಜೀವಿಗಳ ಉಪಟಳ ತಡೆಯಬೇಕು ಎಂಬ ಬೇಡಿಕೆ ಇರಿಸಿ ಭಾರಿ ಹೋರಾಟ ಮಾಡಲಾಗುತ್ತದೆ.ಕಳಸ ತಾಲ್ಲೂಕಿನ ರಾಜಕೀಯ ಪಕ್ಷಗಳು, ಹಲವಾರು ಸಂಘಟನೆಗಳು ಚಳವಳಿಗೆ ಬೆಂಬಲ ನೀಡಿವೆ ಎಂದೂ ಮಂಜಪ್ಪಯ್ಯ ಮಾಹಿತಿ ನೀಡಿದ್ದಾರೆ.
11ರಂದು ಕಳಸ ಪಟ್ಟಣ ಬಂದ್, ಪ್ರತಿಭಟನಾ ಸಭೆಗೆ ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಸಂಸದರಿಗೆ ಕೂಡ ಆಹ್ವಾನ ನೀಡಲಾಗಿದೆ.ಸರ್ಕಾರದ ಮಟ್ಟದಲ್ಲಿ ಬೆಳೆಗಾರರ ಪರವಾಗಿ ದನಿ ಎತ್ತರಿಸುವ ಅಗತ್ಯ ಇದೆ ಎಂದು ಅವರಿಗೂ ಮನವರಿಕೆ ಮಾಡುವ ಪ್ರಯತ್ನ ನಡೆಯಲಿದೆ ಎಂದೂ ಮಂಜಪ್ಪಯ್ಯ ತಿಳಿಸಿದ್ದಾರೆ.
