ಕಳಸ:ಅರಣ್ಯ ಇಲಾಖೆಯಿಂದ ಕೃಷಿ ಭೂಮಿಯ ಖುಲ್ಲಾ ಯತ್ನ ಖಂಡಿಸಿ ಕಳಸದಲ್ಲಿ ಬುಧವಾರ ಬಂದ್ ಮತ್ತು ಪ್ರತಿಭಟನಾ ಸಭೆ ನಡೆಯಿತು.
ಕಳಸೇಶ್ವರ ದೇವಸ್ಥಾನದಿಂದ ಆರಂಭಿಸಿ ಪಟ್ಟಣದ ಎಲ್ಲ ರಸ್ತೆಗಳಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ 3000ಕ್ಕೂ ಹೆಚ್ಚು ಬೆಳೆಗಾರರು ಫಲಕಗಳನ್ನು ಹಿಡಿದು ಸಾಗಿದರು. ನಾವು ರೈತರು,ಭೂಗಳ್ಳರಲ್ಲ ಹಾಗೂ ಡೀಮ್ಡ್ ಅರಣ್ಯ ರದ್ದಾಗಲಿ ಎಂಬ ಘೋಷಣೆ ಕೂಗಿದರು.
ಪ್ರಾಸ್ತಾವಿಕ ಮಾತನಾಡಿದ ಜಿ.ಕೆ.ಮಂಜಪ್ಪಯ್ಯ, ಅವಿಭಕ್ತ ಕುಟುಂಬಗಳು ವಿಭಜನೆ ಆಗುತ್ತಿದ್ದು ಆಸುಪಾಸಿನ ಭೂಮಿಯಲ್ಲಿ ಕೃಷಿ ಮಾಡಿದ್ದಾರೆ.ಇದು ಭೂಕಬಳಿಕೆ ಅಲ್ಲ. 1.15 ಲಕ್ಷ ಎಕರೆ ಕಂದಾಯ ಭೂಮಿಯನ್ನು ಡೀಮ್ಡ್ ಎಂದು ಆದೇಶ ಮಾಡುವಾಗ ಕೃಷಿ ಭೂಮಿ ಹೊರತುಪಡಿಸಿಲ್ಲ, ಗಡಿಗುರುತು ಮಾಡಿಲ್ಲ. ಅರಣ್ಯ ಇಲಾಖೆಯ ಸ್ವಾಧೀನದಲ್ಲಿ ಇಲ್ಲದ ಭೂಮಿಯನ್ನು ಹೇಗೆ 4/1 ಅಧಿಸೂಚನೆ ಮಾಡಿದಿರಿ ಎಂದು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಮಂಜಪ್ಪಯ್ಯ ತರಾಟೆಗೆ ತೆಗೆದುಕೊಂಡರು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ದೇಶಕ್ಕೆ ಕೋಟ್ಯಂತರ ರೂಪಾಯಿ ವಿದೇಶಿ ವಿನಿಮಯ ತರುವ ಮಲೆನಾಡಿನ ರೈತರ ಜೀವನಕ್ಕೆ ಭದ್ರತೆ ಇಲ್ಲ ಎಂಬುದು ಬೇಸರದ ಸಂಗತಿ. ನಮ್ಮ ಕ್ಷೇತ್ರದಲ್ಲಿ ಒಂದು ಇಂಚು ಭೂಮಿಯನ್ನು ಕೂಡ ಖುಲ್ಲಾ ಮಾಡಲು ನಾನು ಅವಕಾಶ ನೀಡುವುದಿಲ್ಲ. ಅರಣ್ಯ ಅಧಿಕಾರಿಗಳು ಖುಲ್ಲಾ ಮಾಡುವ ಯತ್ನ ಮಾಡಿದರೆ ನಾನು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುತ್ತೇನೆ ಎಂದರು.
ಜಿಲ್ಲೆಯ ಅನೇಕ ಸರ್ವೆ ನಂಬರುಗಳಲ್ಲಿ ಡೀಮ್ಡ್ ಅರಣ್ಯ, ಕಂದಾಯ ಭೂಮಿ ಜೊತೆಗೆ ಸೆಕ್ಟನ್ 4 ಅಧಿಸೂಚನೆ ಕೂಡ ಮಾಡಿರುವುದರಿಂದ ಗೊಂದಲ ಹೆಚ್ಚಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಅಭಿಪ್ರಾಯಪಟ್ಟರು.
ಎಕರೆಗೆ 20 ಮರ ಇದ್ದರೆ ಅದು ಅರಣ್ಯ ಎಂಬ ಹುಚ್ಚು ಅಭಿಪ್ರಾಯದ ಆಧಾರಕ್ಕೆ ಮನ್ನಣೆ ಕೊಡುವುದಾದರೆ ಮಲೆನಾಡಿನ ಪ್ರತಿಯೊಂದು ಜಮೀನು ಕೂಡ ಕಾಡು ಆಗುತ್ತದೆ.ಆಗ ಕೃಷಿಕರಲ್ಲರೂ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ದೇಶದ ಜನಸಂಖ್ಯೆ 35 ಕೋಟಿ ಇದ್ದಾಗ ಮಾಡಿದ ಅರಣ್ಯ ಕಾನೂನು ದೇಶದ ಜನಸಂಖ್ಯೆ 140 ಕೋಟಿ ಆಗಿರುವಾಗ ಅಪ್ರಸ್ತುತ ಆಗುತ್ತಿವೆ.ಈಗ ಕೃಷಿ ಭೂಮಿ ಖುಲ್ಲಾ ಮಾಡಿದರೆ ದೇಶದ ಎಲ್ಲರಿಗೂ ಆಹಾರ ಸಿಗದೇ ಇರುವ ಅಪಾಯವೂ ಇದೆ ಎಂದರು.
ಮಲೆನಾಡಿನ ಕಾಫಿ ತೋಟಗಳು ಅರಣ್ಯದ ಸ್ವರೂಪದಲ್ಲೇ ಇರುತ್ತವೆ ಎಂಬುದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ.ಸದ್ಯಕ್ಕೆ ಯಾವುದೇ ಭೂಮಿ ಖುಲ್ಲಾ ಮಾಡದಂತೆ ಅರಣ್ಯ ಸಚಿವರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.ಈ ಬಗೆಗಿನ ರಾಜಕೀಯ ಪ್ರೇರಿತ ವದಂತಿ ನಂಬಬಾರದು ಎಂದು ಅವರು ಮನವಿ ಮಾಡಿದರು.
ಜಿಲ್ಲೆಯ ಡೀಮ್ಡ್ ಅರಣ್ಯದ ವ್ಯಾಪ್ತಿಯಿಂದ 30 ಸಾವಿರ ಎಕರೆ ಭೂಮಿ ಕೈಬಿಡಲು ಅವಕಾಶ ಇದ್ದು ಆ ಪ್ರಕ್ರಿಯೆ ಆರಂಭವಾಗಿದೆ.ಇದರಿಂದ ಶೇ.90 ಕೃಷಿಕರಿಗೆ ಕೃಷಿ ಭೂಮಿ ಗುತ್ತಿಗೆ ಆಧಾರದಲ್ಲಿ ಸಿಗಲಿದೆ ಎಂದರು.
ಕಾಂಗ್ರೆಸ್ ಮುಖಂಡ ಸುಧೀರ್ ಕುಮರ್ ಮುರೊಳ್ಳಿ ಮಾತನಾಡಿ, ಕಳಸ ತಾಲ್ಲೂಕಿನ ಸೆಕ್ಷನ್ 4 ಚಿತ್ರಣ ಗಮನಿಸಿದರೆ ಶೇ.80 ಭೂಮಿಯನ್ನು ಮೀಸಲು ಅರಣ್ಯ ಮಾಡುವ ಹುನ್ನಾರ ಕಂಡು ಬರುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ತಮ್ಮ ಆಕ್ಷೇಪಣೆಯನ್ನು ಸೆಟ್ಲ್ಮೆಂಟ್ ಅಧಿಕಾರಿಗೆ ಸಲ್ಲಿಸಬೇಕು ಎಂದರು.
ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಮಾತನಾಡಿ, ದೇಶದ ಎಲ್ಲ ಅರಣ್ಯ ಕಾಯ್ದೆಗಳು ಕೃಷಿಕರ ವಿರುದ್ಧವಾಗಿವೆ.ಅವುಗಳಿಗೆ ತಿದ್ದುಪಡಿ ತರಲು ಇದು ಸಕಾಲವಾಗಿದೆ ಎಂದರು. ರೈತ ಸಂಘದ ದಯಾಕರ್ ಮಾತನಾಡಿ, ರೈತರ ಪರವಾಗಿ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲು ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಬೇಕು ಎಂದರು.

ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ಜಿಲ್ಲೆಯಲ್ಲಿ ಶೇ.90 ಉದ್ಯೋಗ ನೀಡಿರುವ ಕಾಫಿ ಉದ್ಯಮಕ್ಕೆ ಕಳೆದ 4 ದಶಕಗಳಿಂದ ಒತ್ತುವರಿ ಸಮಸ್ಯೆ ಕಂಟಕವಾಗಿದೆ ಎಂದರು.
ಮಾಜಿ ಶಾಸಕ ವಿಶ್ವನಾಥ್ ಮಾತನಾಡಿ, ವಿದೇಶಿ ಹಣದ ಆಸೆಗೆ ನಮ್ಮ ಭೂಮಿಯಲ್ಲಿ ಅಕೇಶಿಯಾ ಬೆಳೆದ ನೀವು ವನ್ಯಜೀವಿಗಳು ಕೃಷಿ ಭೂಮಿಗೆ ಲಗ್ಗೆ ಇಡಲು ಕಾರಣರಾಗಿದ್ದೀರಿ ಎಂದು ಅರಣ್ಯ ಇಲಾಖೆಯನ್ನು ದೂಷಿಸಿದರು.
ಒತ್ತುವರಿ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿ ಬಳಿಗೆ ಸರ್ವಪಕ್ಷಗಳ ನಿಯೋಗದೊಂದಿಗೆ ಹೋಗಿ ಜನರ ಸಮಸ್ಯೆ ಪ್ರಸ್ತಾಪಿಸಿ ಪರಿಹಾರ ದೊರಕಿಸುವ ವಿಶ್ವಾಸ ಇದೆ ಎಂದೂ ಅವರು ಹೇಳಿದರು.

ಬೆಳೆಗಾರರ ಸಂಘದ ಮುಖಂಡರಾದ ಜಯರಾಮ್, ಬಾಲಕೃಷ್ಣ, ಕೆ.ಆರ್.ಭಾಸ್ಕರ್, ಕೆ.ಆರ್. ಪ್ರಭಾಕರ್, ಶೇಷಗಿರಿ, ಶ್ರೇಣಿಕ, ರಾಜೇಂದ್ರ, ಕೆಜಿಎಫ್ ಉಪಾಧ್ಯಕ್ಷ ಎ.ಕೆ.ವಸಂತೇಗೌಡ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಭಾಗವಹಿಸಿದ್ದರು.
ಇದಕ್ಕೂ ಮುನ್ನ ಕಳಸೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ 3 ಸಾವಿರಕ್ಕೂ ಹೆಚ್ಚು ಕೃಷಿಕರು ಭಾಗವಹಿಸಿದ್ದರು.ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳು, ಶಾಲಾ ಕಾಲೇಜುಗಳು ಮುಚ್ಚಿ ಬಂದ್ ಕರೆಗೆ ಓಗೊಟ್ಟವು.
