ಕಳಸ:ಬಾಳೆಹೊಳೆಯಲ್ಲಿ ಮಂಗಳವಾರ ಚನ್ನಕೇಶವ ಸ್ವಾಮಿಯ ರಥೋತ್ಸವ ಭಕ್ತರ ಸಡಗರದ ನಡುವೆ ನೆರವೇರಿತು.
ಸೋಮವಾರ ಗಣಪತಿ ಹೋಮ, ಧ್ವಜಾರೋಹಣದ ಮೂಲಕ ರಥೋತ್ಸವದ ಧಾರ್ಮಿಕ ವಿಧಿಗಳು ಆರಂಭಗೊಂಡಿದ್ದವು.ದೇಗುಲದ ಸುತ್ತಲೂ ಹೂವಿನ ಮತ್ತು ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು.
ಮಂಗಳವಾರ ಬಾಳೆಹೊಳೆ ಮತ್ತು ಆಸುಪಾಸಿನ ಗ್ರಾಮಗಳ ಭಕ್ತರು ದೇವಸ್ಥಾನದಲ್ಲಿ ನೆರೆದಿದ್ದರು. ದೇಗುಲದ ಸುತ್ತಲೂ ಚನ್ನಕೇಶವ ಸ್ವಾಮಿಯ ಉತ್ಸವ ಮೂರ್ತಿಯ ಪ್ರದಕ್ಷಿಣೆ ನಡೆಯಿತು. ಆನಂತರ ರಥಾರೋಹಣದ ಸಂದರ್ಭದಲ್ಲಿ ಭಕ್ತರು ಹರ್ಷೋದ್ಘಾರ ಹಾಕಿದರು.
ಭಕ್ತರು ರಥವನ್ನು ಉತ್ಸಾಹದಿಂದ ಎಳೆದರು. ಲಯಬದ್ಧವಾದ ವಾದ್ಯಘೋಷ ಮತ್ತು ಬಣ್ಣದ ಧ್ವಜ, ಪತಾಕೆಗಳು ರಥೋತ್ಸವಕ್ಕೆ ಮೆರುಗು ನೀಡಿದ್ದವು.
