ಕಳಸ:ತಮ್ಮ ಜೀವನವಿಡೀ ಯಕ್ಷಗಾನವೇ ಉಸಿರು ಎಂಬಂತೆ ಬದುಕಿರುವ ಹಳುವಳ್ಳಿ ಸಮೀಪದ ತಂಬಿಕುಡಿಗೆ ನಿವಾಸಿ ಟಿ.ಎನ್.ಜ್ಯೋತಿ ಅವರಿಗೆ ದೊಡ್ಡ ಮಾನ್ಯತೆ ಸಿಕ್ಕಿದೆ. ಅವರನ್ನು ಕರ್ನಾಟಕ ಯಕ್ಷಗಾನ ಆಕಾಡೆಮಿಯ ಯಕ್ಷಸಿರಿ ಪ್ರಶಸ್ತಗೆ ಆರಿಸಲಾಗಿದೆ.
ಕೃಷಿಕ ಕುಟುಂಬದ ಗೃಹಿಣಿ ಜ್ಯೋತಿ ಯಕ್ಷಗಾನ ಕಲಾವಿದೆ. ಜೊತೆಗೆ ಯಕ್ಷಕಲೆ ಧಾರೆ ಎರೆಯುವ ಗುರುವೂ ಆಗಿದ್ದಾರೆ.
ಸುರತ್ಕಲ್ ಬಳಿಯ ಕಾಟಿಪಳ್ಳ ಗ್ರಾಮದ ಮೂಲದ ಜ್ಯೋತಿ ತಮ್ಮ ಕಾಲೇಜು ದಿನಗಳಲ್ಲಿ ಯಕ್ಷ ಕಲೆಯ ಬಗ್ಗೆ ಆಸಕ್ತಿ ಹೊಂದಿ ಅಲ್ಲೇ ತರಬೇತಿ ಪಡೆದಿದ್ದರು.ಕಾಟಿಪಳ್ಳದ ಮಹಾಗಣಪತಿ ಮಹಿಳಾ ಯಕ್ಷಗಾನ ಮೇಳದಲ್ಲಿ 5 ವರ್ಷ ವೇಷ ಹಾಕಿ ಸೈ ಎನಿಸಿಕೊಂಡಿದ್ದರು.
ಆನಂತರ ಹಳುವಳ್ಳಿ ಸಮೀಪದ ತಂಬಿಕುಡಿಗೆ ಗ್ರಾಮದ ನಾರಾಯಣ ಅವರನ್ನು ವಿವಾಹವಾಗಿ ಮಲೆನಾಡಿನಲ್ಲಿ ನೆಲೆಸಿದರು.ಆದರೆ ಯಕ್ಷಕಲೆಯ ಬಗ್ಗೆ ಇದ್ದ ಸೆಳೆತ ಅವರನ್ನು ಬಿಡಲೇ ಇಲ್ಲ. ಹಳುವಳ್ಳಿಯಲ್ಲೂ ಯಕ್ಷಗಾನ ಕಲೆಗೆ ತಮ್ಮನ್ನು ಮುಡಿಪಾಗಿಟ್ಟ ಜ್ಯೋತಿ ಇಲ್ಲಿನ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಯಕ್ಷಕಲೆ ಕಲಿಸುವ ಕೆಲಸವನ್ನು ನಿಯಮಿತವಾಗಿ ಮಾಡುತ್ತಿದ್ದಾರೆ. 20 ವರ್ಷಕ್ಕೂ ಹೆಚ್ಚು ಕಾಲ ಯಕ್ಷಗುರುವಾಗಿ ಸೇವೆ ಸಲ್ಲಿಸುತ್ತಿದ್ದು ಆಗಾಗ್ಗೆ ವೃತ್ತಿಪರ ಮೇಳದಲ್ಲಿ ಪಾತ್ರಧಾರಿಯೂ ಆಗಿ ತೃಪ್ತಿ ಹೊಂದುತ್ತಿದ್ದಾರೆ.

ಹಳುವಳ್ಳಿಯ ಶ್ರೀಕುಮಾರ ಸಾಂಸ್ಕ್ರತಿಕ ಪ್ರತಿಷ್ಟಾನದಲ್ಲಿ 500ಕ್ಕೂ ಹೆಚ್ಚು ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿದ್ದಾರೆ.ಜ್ಯೋತಿ ಮಾರ್ಗದರ್ಶನದಲ್ಲಿ ಈ ಮಕ್ಕಳು ರಾಷ್ಟ್ರಮಟ್ಟದವರೆಗೂ ಹೋಗಿ ಹಲವಾರು ಪ್ರದರ್ಶನ ನೀಡಿದ್ದಾರೆ.
ಪಟ್ಲಧ್ರುವ ಯಕ್ಷ ಫೌಂಡೇಶನ್ ಆಶ್ರಯದಲ್ಲಿ ಬಸರೀಕಟ್ಟೆ ಸದ್ಗುರು ಪ್ರೌಢಶಾಲೆಯಲ್ಲಿ ಮತ್ತು ಕುಮಾರ ಪ್ರತಿಷ್ಟಾನದ ಅಡಿ ಕಳಸದಲ್ಲಿ ಈಗಲೂ ತರಬೇತಿ ನಡೆಸುತ್ತಿದ್ದಾರೆ.ತೆಂಕುತಿಟ್ಟು ಪ್ರಕಾರದಲ್ಲಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಯಕ್ಷ ನೃತ್ಯ, ಭಾಗವತಿಕೆ, ವೇಷಭೂಷಣ ಕಲಿಸುತ್ತಿದ್ದಾರೆ.
ಈವರೆಗೆ ಬೆಂಗಳೂರು, ಎನ್.ಆರ್.ಪುರ, ನಿಡುವಾಳೆ, ಜಾವಳಿಯಲ್ಲಿ ಕೂಡ ತರಬೇತಿ ನೀಡಿದ್ದಾರೆ. ಇವರ ತಂಡದ ಮಕ್ಕಳು ಮತ್ತು ಮಹಿಳೆಯರು ಬೇರೆ ಬೇರೆ ಊರುಗಳಲ್ಲಿ ವರ್ಷಕ್ಕೆ 10-15 ಪ್ರದರ್ಶನ ನೀಡುತ್ತಾರೆ.ತಮ್ಮ ಮಗಳನ್ನು ಕೂಡ ಸತತ ತರಬೇತಿ ಮೂಲಕ ಯಕ್ಷಗಾನ ಕಲಾವಿದೆ ಮತ್ತು ಯಕ್ಷಗುರುವನ್ನಾಗಿ ಜ್ಯೋತಿ ಪಳಗಿಸಿದ್ದಾರೆ.
56 ವರ್ಷ ವಯಸ್ಸಿನ ಜ್ಯೋತಿ ‘ನನಗೆ ಯಾವುದೇ ಪ್ರಶಸ್ತಿ ಬಗ್ಗೆ ಆಸೆ, ನಂಬಿಕೆ ಇಲ್ಲ. ನನ್ನ ಕೈ ಕಾಲು ಗಟ್ಟಿ ಇರುವವರೆಗೂ ಯಕ್ಷಗಾನಕ್ಕೆ ಜೀವನ ಮುಡಿಪು ಇಡುತ್ತೇನೆ ಅಷ್ಟೇ’ ಎಂದು ಹೇಳುತ್ತಾರೆ.
