ಕಳಸ:ತಾಲ್ಲೂಕಿನಲ್ಲಿ ಇರುವ ಮೂರು ರಾಜ್ಯ ಹೆದ್ದಾರಿಗಳ ಪೈಕಿ ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ಗತವೈಭವ ನೆನಪಿಸುತ್ತಿರುವಂತೆ ಕಳಸ-ಹೊರನಾಡು ರಸ್ತೆ ಕೂಡ ಇತಿಹಾಸದ ಪುಟ ಸೇರುತ್ತಿದೆ.
ರಸ್ತೆ ಪಕ್ಕದ ಚರಂಡಿ ನಿರ್ವಹಣೆ ಇಲ್ಲದೆ, ಗುಣಮಟ್ಟದ ಕೆಲಸಕ್ಕೆ ಆದ್ಯತೆ ನೀಡದೆ ಕಳಸ ತಾಲ್ಲೂಕಿನ ರಸ್ತೆಗಳೆಲ್ಲವೂ ಕೆಸರುಗುಂಡಿಗಳಾಗುತ್ತಿವೆ ಎಂಬ ದೂರಿನ ಬೆನ್ನಲೇ ಹೊರನಾಡು ರಸ್ತೆ ತೀರಾ ಅಧ್ವಾನದ ಸ್ಥಿತಿಗೆ ತಲುಪಿದೆ.
ಕಳಸದಿಂದ 7 ಕಿ.ಮೀ ದೂರದ ಹೊರನಾಡು ರಸ್ತೆಯು ವಾರಾಂತ್ಯದಲ್ಲಿ ಅತಿ ಹೆಚ್ಚಿನ ಪ್ರವಾಸಿಗರಿಂದ ಬಳಕೆ ಆಗುವ ರಾಜ್ಯ ಹೆದ್ದಾರಿ.ಆದರೆ ಈ ರಸ್ತೆಯ ಸ್ಥಿತಿ ಗ್ರಾಮೀಣ ಪ್ರದೇಶದ ರಸ್ತೆಗಳಿಗಿಂತ ಹಾಳಾಗಿದೆ.

ಈ ಹೆದ್ದಾರಿಯ ಮಧ್ಯೆಯೇ ಅರ್ಧ ಅಡಿ ಆಳದ ದೊಡ್ಡ ಗಾತ್ರದ ಗುಂಡಿಗಳು ಇದ್ದು ಮಳೆ ನೀರು ತುಂಬಿಕೊಂಡಿರುತ್ತದೆ. ಈ ಗುಂಡಿಗಳಿಗೆ ಕಾರುಗಳನ್ನು ಇಳಿಸಿದಾಗ ವಾಹನಗಳಿಗೆ ಆಘಾತ ಮತ್ತು ಹಾನಿ ಆಗುತ್ತಿದೆ. 7 ಕಿಮೀ ರಸ್ತೆಯಲ್ಲಿ ಒಂದೆರಡು ಕಿ.ಮೀ. ಬಿಟ್ಟರೆ ಉಳಿದ ಎಲ್ಲ ರಸ್ತೆಯೂ ಬಳಕೆಗೆ ಯೋಗ್ಯ ವಲ್ಲ ಎಂಬ ಸ್ಥಿತಿಗೆ ತಲುಪಿದೆ.
ಕಳೆದ ವರ್ಷದ ಮಳೆಗಾಲದಲ್ಲೇ ಈ ರಸ್ತೆಗೆ ಹಾನಿ ಆಗಿತ್ತು.ಆಗಿನಿಂದ ರಸ್ತೆ ಪಕ್ಕದ ಚರಂಡಿ ನಿರ್ವಹಣೆ ಮಾಡಿದ್ದರೆ ರಸ್ತೆ ಉಳಿಯುತ್ತಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಈಗ ಈ ರಸ್ತೆ ಸಂಪೂರ್ಣ ಹಾಳಾಗಿದೆ. ಈ ವರ್ಷದ ಮಳೆಗಾಲವಿಡೀ ಈ ರಸ್ತೆ ಹೇಗೆ ಬಳಸುವುದು ಎಂಬುದೇ ಚಿಂತೆ ಆಗಿದೆ ಎಂದು ಹೊರನಾಡಿನ ಉದ್ಯಮಿ ಅಜಿತ್ಕುಮಾರ್ ಬೇಸರಿಸುತ್ತಾರೆ.
ಹೊರನಾಡು ಕ್ಷೇತ್ರ ನಾಡಿನಲ್ಲೇ ಪ್ರಸಿದ್ಧಿ ಆಗಿದೆ. ಆದರೆ ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾತ್ರ ಯಾಕೆ ಇಷ್ಟು ಕೆಟ್ಟದಾಗಿದೆ ಎಂದು ಅರ್ಥ ಆಗುತ್ತಿಲ್ಲ. ಸಂಬಂಧಪಟ್ಟವರು ಯಾಕೆ ಇಷ್ಟು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ತಮಿಳುನಾಡಿನಿಂದ ಹೊರನಾಡು ಪ್ರವಾಸಕ್ಕೆ ಬಂದಿದ್ದ ಉದ್ಯಮಿ ಸೆಲ್ವರಾಜು ಅಭಿಪ್ರಾಯಪಟ್ಟರು.
ಕಳಸ-ಹೊರನಾಡು ರಸ್ತೆಯ ಗಣಪತಿಕಟ್ಟೆ ಪ್ರದೇಶದಲ್ಲೂ ಕೂಡ ರಸ್ತೆ ಮೂಲ ಸ್ವರೂಪ ಕಳೆದುಕೊಂಡಿದೆ.ಕಸದ ವಿಲೇವಾರಿ ಘಟಕದ ಬಳಿ ರಸ್ತೆಯು ಚರಂಡಿಗೆ ಕುಸಿಯುತ್ತಿದೆ.ಹೆಬ್ಬೊಳೆ ನೂತನ ಸೇತುವೆಯ ತಿರುವಿನಲ್ಲಿ ಕೂಡ ರಸ್ತೆಗೆ ಬಹಳಷ್ಟು ಹಾನಿ ಆಗಿದೆ. ಹೊರನಾಡು ಗ್ರಾಮ ಪಂಚಾಯಿತಿ ಕಚೇರಿ ಬಳಿ 100 ಅಡಿ ಉದ್ದಕ್ಕು ರಸ್ತೆಯಲ್ಲೇ ಕೆರೆಗಳು ಮೂಡಿವೆ.ದಾರಿಮನೆಯಿಂದ ಹೆಬ್ಬೊಳೆವರೆಗೂ ರಸ್ತೆಯಲ್ಲಿ ಡಾಂಬರು ಮಾಯವಾಗಿದೆ. ಇಷ್ಟೆಲ್ಲಾ ಹಾನಿ ಆಗಿದ್ದರೂ ಲೋಕೋಪಯೋಗಿ ಇಲಾಖೆ ಯಾವ ಕ್ರಮ ವಹಿಸಿದೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.
ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಚೆನ್ನಯ್ಯ ಅವರನ್ನು ಪ್ರಶ್ನಿಸಿದಾಗ,ಅವರು ಕಳಸ-ಹೊರನಾಡು ರಸ್ತೆ ದುರಸ್ತಿ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
‘ಶಾಸಕಿ ನಯನಾ ಮೋಟಮ್ಮ ಹೊರನಾಡು ರಸ್ತೆ ಮರುಡಾಂಬರೀಕರಣಕ್ಕೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.ಲೋಕೋಪಯೋಗಿ ಸಚಿವರ ಜೊತೆ ಮಾತುಕತೆ ನಡೆದಿದ್ದು 3 ಕೋಟಿ ಅನುದಾನ ಸದ್ಯದಲ್ಲೇ ಬಿಡುಗಡೆ ಆಗುವ ನಿರೀಕ್ಷೆ ಇದೆ ಎಂದು ಶಾಸಕಿಯ ಆಪ್ತ ಕಾರ್ಯದರ್ಶಿ ಸಂಶುದ್ದೀನ್ ತಿಳಿಸಿದರು.
