ಕಳಸ:ಸಂಸೆ ಪಂಚಾಯಿತಿಯ ಎಸ್.ಕೆ.ಮೇಗಲ್ ಗ್ರಾಮದಿಂದ ಕೊಣೆಗೋಡು ಹರಿಜನ ಕಾಲೋನಿ, ಹಡ್ಲುಮನೆ, ಬಿಳಲ್ಗೋಡು ಮತ್ತಿತರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅವ್ಯವಸ್ಥೆ ಬಗ್ಗೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಈ ಗ್ರಾಮಗಳಲ್ಲಿ 100ಕ್ಕೂ ಹೆಚ್ಚು ಮನೆಗಳು ಇದ್ದು ರಸ್ತೆ ಸಂಪೂರ್ಣ ಗುಂಡಿಗಳಿಂದ ತುಂಬಿದೆ.ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಮಾಡದಂತಹ ಸ್ಥಿತಿ ಇದೆ. ಬೈಕ್ ಸವಾಆರರು ಗುಂಡಿಯಲ್ಲಿ ಬಿದ್ದರೆ ಕಾರು ಮತ್ತು ಆಟೊಗಳು ಸಿಲುಕಿಕೊಳ್ಳುತ್ತಿವೆ. ಕೆಸರು ತುಂಬಿದ ರಸ್ತೆಯಲ್ಲಿ ಜನರು ಓಡಾಡಲೂ ಅಸಾಧ್ಯ ಎಂಬಂತಾಗಿದೆ.

ರಸ್ತೆ ಗುಂಡಿ ಕಾರಣಕ್ಕೆ ಬಾಡಿಗೆ ಆಟೊ ಕೂಡ ಇಲ್ಲಿಗೆ ಬರುತ್ತಿಲ್ಲ.ಶಾಲಾ ಮಕ್ಕಳು, ಕೃಷಿಕರು, ರೋಗಿಗಳು ರಸ್ತೆ ದುರವಸ್ಥೆಯಿಂದಾಗಿ ಪಾದಯಾತ್ರೆ ಮಾಡಲೇಬೇಕಾದ ಅನಿವಾರ್ಯತೆ ಇದೆ.
ಸಣ್ಣ ವಯಸ್ಸಿನ ಶಾಲಾ ಮಕ್ಕಳನ್ನು ಗ್ರಾಮಸ್ಥರು ಎಸ್.ಕೆ.ಮೇಗಲ್ ಶಾಲೆವರೆಗೆ 2 ಕಿ.ಮೀ ಎತ್ತುಕೊಂಡು ಬಂದು ಶಾಲಾವಾಹನಕ್ಕೆ ಹತ್ತಿಸುತ್ತಿದ್ದಾರೆ. ಸಂಜೆ ಮತ್ತೆ ಮಕ್ಕಳನ್ನು ಎತ್ತಿಕೊಂಡು ಮನೆಗೆ ಕರೆದುಕೊಂಡು ಬರಬೇಕಾಗಿದೆ.

ಗ್ರಾಮ ಪಂಚಾಯತಿಗೆ ಈ ರಸ್ತೆ ಅಭಿವೃದ್ಧಿ ಬಗ್ಗೆ ಮನವಿ ಮಾಡಿದರೂ ಉಪಯೋಗ ಆಗಿಲ್ಲ. ಶಾಸಕರು ಗಮನ ಹರಿಸಿ 2 ಕಿ.ಮೀ ರಸ್ತೆಗೆ ಡಾಂಬರೀಕರಣ ಮಾಡಿದರೆ ನಮ್ಮ ಸಮಸ್ಯೆ ಬಗೆಹರಿಯುತ್ತದೆ. ಮಳೆಗಾಲ ಕಳೆದ ಕೂಡಲೇ ನಮ್ಮ ರಸ್ತೆ ಡಾಂಬರೀಕರಣ ಮಾಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸುತ್ತಾರೆ.
