ಕಳಸ:ಕಳಸ-ಕಳಕೋಡು ರಸ್ತೆಯ ಕೊಳಮಗೆ ಬಳಿ ಭದ್ರಾ ನದಿಗೆ ಗುರುವಾರ ಮಧ್ಯಾಹ್ನ ಪಿಕ್ ಅಪ್ ವಾಹನ ಬಿದ್ದಿದ್ದು ಯುವಕನೊಬ್ಬ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ.
ಗಣಪತಿಕಟ್ಟೆಯ ರಮೇಶ ಮತ್ತು ರವಿಕಲಾ ದಂಪತಿಯ ಮಗ ಶಮಂತ (22) ಗುರುವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಕಳಕೋಡಿನ ಕಡೆಗೆ ತನ್ನ ಪಿಕ್ ಅಪ್ ವಾಹನದಲ್ಲಿ ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.ಕಳಕೋಡಿನಿಂದ ತೋಟದ ಕಾರ್ಮಿಕರನ್ನು ಕಳಸಕ್ಕೆ ಕರೆತರಲು ಹೋಗಿದ್ದಾಗ ಈ ಅಪಘಾತ ಸಂಭವಿಸಿದೆ..

ಅತಿವೇಗದಲ್ಲಿ ಹೋದ ಪಿಕ್ ಅಪ್ ರಸ್ತೆ ಪಕ್ಕದಲ್ಲಿ ಇದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಕಂಬ ಮೂರು ತುಂಡುಗಳಾಗಿ ಬಿದ್ದಿದ್ದು ವಾಹನ ಭದ್ರಾ ನದಿಗೆ ಉರುಳಿರುವ ಶಂಕೆ ಇದೆ.
ನದಿಯಲ್ಲಿ 20 ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದು ವಾಹನ ಕಾಣುತ್ತಿಲ್ಲ. ವಾಹನ ಚಲಾಯಿಸುತ್ತಿದ್ದ ಶಮಂತ ವಾಹನದಲ್ಲೇ ಸಿಲುಕಿರಬೇಕು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ನೂರಾರು ಜನರು ಧಾವಿಸಿದ್ದು ಕಳಸ ಪೊಲೀಸರು ಅಗತ್ಯ ಕ್ರಮ ವಹಿಸಿದ್ದಾರೆ.ಅಗ್ನಿಶಾಮಕ ಸಿಬ್ಬಂದಿ ಬಂದ ನಂತರ ಶವ ಪತ್ತೆಗೆ ಪ್ರಯತ್ನ ನಡೆಸಲಾಗುತ್ತದೆ.
