ಕಳಸ:ಗುರುವಾರ ಮಧ್ಯಾಹ್ನ ಭದ್ರಾ ನದಿಗೆ ಪಿಕ್ ಅಪ್ ಬಿದ್ದು ಮಗ ಕಣ್ಮರೆಯಾದ ದುಃಖ ಸಹಿಸದೆ ಆತನ ತಾಯಿ ಕೂಡ ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗಣಪತಿಕಟ್ಟೆಯಲ್ಲಿ ನಡೆದಿದೆ.
ಕಳಸ-ಕಳಕೋಡು ರಸ್ತೆಯ ಕೊಳಮಗೆಯಲ್ಲಿ ರಸ್ತೆ ಪಕ್ಕದಲ್ಲಿ ಹರಿಯುವ ಭದ್ರಾ ನದಿಗೆ ಶಮಂತ್ (೨೨) ಓಡಿಸುತ್ತಿದ್ದ ಪಿಕ್ ಅಪ್ ವಾಹನ ಗುರುವಾರ ಮಧ್ಯಾಹ್ನ ೩ ಗಂಟೆ ವೇಳೆಗೆ ಉರುಳಿ ಬಿದ್ದಿತ್ತು.

ಸಂಜೆವರೆಗೂ ಶಮಂತನ ಶವ ಪತ್ತೆ ಆಗಿಲ್ಲ. ಶಮಂತನ ತಾಯಿ ರವಿಕಲಾ (೪೫) ಮಗನ ಅಪಘಾತ ನಡೆದ ಸ್ಥಳಕ್ಕೆ ತೆರಳಿ ಅತೀವ ದುಃಖದಿಂದ ಮನೆಗೆ ಮರಳಿದ್ದರು.ರವಿಕಲಾ ಅವರು ಕಾಫಿ ತೋಟಗಳಿಗೆ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಕೆಲಸ ಮಾಡಿಸುವ ಮೇಸ್ತಿç ಆಗಿದ್ದರು. ಇದೇ ಉದ್ದೇಶಕ್ಕೆ ೬ ತಿಂಗಳ ಹಿಂದೆ ಮಗನಿಗೆ ಪಿಕ್ ಅಪ್ ವಾಹನ ಕೂಡ ಕೊಡಿಸಿದ್ದರು.

ಮಗನು ವಾಹನದ ಸಮೇತ ಭದ್ರಾ ನದಿಗೆ ಬಿದ್ದಿದ್ದರಿಂದ ರವಿಕಲಾ ಆಘಾತಗೊಂಡಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುವ ಹಿರಿಯ ಮಗ ಕೂಡ ಮನೆಗೆ ಮರಳಿದ್ದರು. ಆತನಿಗೆ ಗುರುವಾರ ರಾತ್ರಿ ಧೈರ್ಯ ಹೇಳಿದ್ದ ತಾಯಿ ರಾತ್ರಿ ೧೦.೩೦ರ ವೇಳೆಗೆ ತಮ್ಮ ಮನೆಯ ಸಮೀಪದ ಕೆರೆಗೆ ಹಾರಿದರು. ಆಸುಪಾಸಿನ ಯುವಕರು ಅವರನ್ನು ಪಾರು ಮಾಡುವ ಯತ್ನ ಮಾಡಿದರೂ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ತಾಯಿ, ಮಗನ ಸಾವಿನಿಂದ ಗಣಪತಿಕಟ್ಟೆ ಪ್ರದೇಶದಲ್ಲಿ ದುಃಖ ಆವರಿಸಿದೆ.ಅಲ್ಲಿನ ನೂರಾರು ಕಾರ್ಮಿಕರು ಶುಕ್ರವಾರ ಕೆಲಸಕ್ಕೆ ಹೋಗದೆ ರತ್ನಕಲಾ ಮನೆ ಬಳಿ ಜಮಾಯಿಸಿದ್ದಾರೆ. ಶಮಂತನ ಶವವನ್ನು ಭದ್ರಾ ನದಿಯಲ್ಲಿ ಪತ್ತೆ ಮಾಡುವ ಕೆಲಸ ಇಂದು ನಡೆಯಲಿದೆ.
