ಕಳಸ:ಭದ್ರಾ ನದಿಯಲ್ಲಿ ಸತತ ಎರಡು ದಿನಗಳ ಕಾಲ ಅಗ್ನಿಶಾಮಕ ದಳ, ಬಣಕಲ್ ಆರೀಫ್ ತಂಡ, ಎನ ಡಿ ಆರ್ ಎಫ್ ತಂಡ ನಡೆಸಿದ ಯತ್ನ ಈವರೆಗೂ ಫಲ ಕೊಟ್ಟಿಲ್ಲ. ಕಳಕೋಡು ರಸ್ತೆಯ ಕೊಳಮಗೆ ಸಮೀಪ ಭದ್ರಾ ನದಿಗೆ ಗುರುವಾರ ಮಧ್ಯಾಹ್ನ ಪಿಕ್ಅಪ್ ವಾಹನ ಬಿದ್ದ ನಂತರ ನಾಪತ್ತೆ ಆಗಿರುವ ಯುವಕ ಶಮಂತ್ಗಾಗಿ ನದಿಯಲ್ಲಿ ಸತತ ಹುಡುಕಾಟ ನಡೆದಿದೆ.

ಶುಕ್ರವಾರ ನದಿಯಿಂದ ಪಿಕ್ ಅಪ್ ವಾಹನ ಎತ್ತಿದರೂ ವಾಹನದಲ್ಲಿ ಶಮಂತ್ ಸಿಗಲಿಲ್ಲ.ಅಗ್ನಿಶಾಮಕ ದಳ ಮತ್ತು ಬಣಕಲ್ ಈಜುಗಾರ ಆರೀಫ್ ತಂಡ ಶನಿವಾರವಿಡೀ ಬಹಳಷ್ಟು ಪ್ರಯತ್ನ ನಡೆಸಿತು. ಎನ್ ಡಿ ಆರ್ ಎಫ್ ತಂಡ ಕೂಡ ಭದ್ರಾ ನದಿಯಲ್ಲಿ ರಬ್ಬರ್ ಬೋಟ್ ಬಳಸಿ ಶವ ಹುಡುಕಾಟದ ಕೆಲಸ ನಡೆಸಿತು.
ಶಮಂತ್ ತಾಯಿ ಆತ್ಮಹತ್ಯೆ ಮಾಡಿಕೊಂಡ ನಂತರ ಸ್ಥಳೀಯರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ದನಿ ಎತ್ತಿದ್ದರು. ಇದಕ್ಕೆ ಉತ್ತರ ಎಂಬAತೆ ಶನಿವಾರ ಉಪ ವಿಭಾಗಾಧಿಕಾರಿ ಸುದರ್ಶನ್, ತಹಶೀಲ್ದಾರ್ ಕಾವ್ಯ, ಡಿವೈಎಸ್ಪಿ ಬಾಲಾಜಿ ಸಿಂಗ್, ಲೋಕೋಪಯೋಗಿ ಎಂಜಿನಿಯರ್ ಚನ್ನಕೇಶವ ಸ್ಥಳಕ್ಕೆ ಭೇಟಿ ನೀಡಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ, ಕಳಸ ಪಂಚಾಯಿತಿ ಸದಸ್ಯ ವೀರೇಂದ್ರ, ಶಾಸಕರ ಆಪ್ತ ಕಾರ್ಯದರ್ಶಿ ಸಂಶುದ್ದೀನ್ ಇದ್ದರು.

ಕೋಟೆಹೊಳೆ ಸೇತುವೆ, ಹೆಬ್ಬೊಳೆ ಸೇತುವೆ, ಹಳುವಳ್ಳಿ ಸೇತುವೆ ಮೇಲೆ ನಿಂತು ಸ್ಥಳೀಯರು ಕಣ್ಗಾವಲು ಇರಿಸಿದರು. ನದಿ ಪಾತ್ರದಲ್ಲಿ ಶವ ಸಿಕ್ಕಿಕೊಂಡಿರುವ ಸಾಧ್ಯತೆ ಬಗ್ಗೆಯೂ ಪರಿಶೀಲನೆ ನಡೆಸಲಾಯಿತು.ಆದರೆ ಶನಿವಾರ ಸಂಜೆವರೆಗೂ ಶಮಂತ್ ಪತ್ತೆಯಾಗಿಲ್ಲ. ಶಮಂತ್ ಮತ್ತು ರವಿಕಲಾ ನಿಧನದಿಂದ ರಮೇಶ್ ಮನೆಯಲ್ಲಿ ಸೂತಕ ಮೂಡಿದೆ. ಮತ್ತೋರ್ವ ಪುತ್ರ ಕೂಡ ಖಿನ್ನತೆಗೆ ಜಾರಿದ್ದಾನೆ.
