ಕಳಸ:ಕೊಳಮಗೆಯಲ್ಲಿ ಭದ್ರಾ ನದಿಗೆ ಪಿಕ್ ಅಪ್ ಬಿದ್ದ ನಂತರ ಕಣ್ಮರೆ ಆಗಿರುವ ಯುವಕ ಶಮಂತ್ ಮತ್ತು ಆತ್ಮಹತ್ಯೆ ಮಾಡಿಕೊಂಡ ಆತನ ತಾಯಿ ರವಿಕಲಾ ವಾಸವಿದ್ದ ಮನೆಗೆ ಶಾಸಕಿ ನಯನಾ ಮೋಟಮ್ಮ ಭಾನುವಾರ ಸಂಜೆ ಭೇಟಿ ನೀಡಿದ್ದರು.
ಗಣಪತಿಕಟ್ಟೆ ಸಮೀಪದ ಅವರ ಮನೆಗೆ ನಯನಾ ಮೋಟಮ್ಮ ಭೇಟಿ ನೀಡಿದಾಗ ಶಮಂತನ ತಂದೆ ರಮೇಶ್, ಅಣ್ಣ ಹಾಗೂ ಕುಟುಂಬಸ್ಥರು ಕಣ್ಣೀರುಗರೆದರು.
ಶಮಂತ ಹಾಗೂ ಆತನ ತಾಯಿ ರವಿಕಲಾ ಸಾವಿನಿಂದ ಮನೆಯ ಭವಿಷ್ಯವೇ ಕಮರಿತು ಎಂದು ರಮೇಶ್ ಹಲುಬಿದರು. ನಾವು ಇದೇ ಸ್ಥಳದಲ್ಲಿ ತಲೆತಲಾಂತರದಿAದ ವಾಸವಾಗಿದ್ದೇವೆ. ಆದ್ದರಿಂದ ನಮ್ಮ ಜಮೀನಿಗೆ ಹಕ್ಕುಪತ್ರ ಕೊಡಬೇಕು. ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಲು ಅನೇಕ ವರ್ಷಗಳಿಂದ ಪ್ರಯತ್ನ ನಡೆದಿದೆ ಎಂದು ಶಾಸಕಿಯ ಬಳಿ ದೂರಿದರು.

ಶಮಂತ ವಾಸವಿದ್ದ ಭೂಮಿಯ ಸ್ವರೂಪ ಮತ್ತು ಮಾಲೀಕತ್ವದ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ್ ಕಾವ್ಯ ಅವರಿಗೆ ಶಾಸಕಿ ಸೂಚಿಸಿದರು. ಶಮಂತನ ಶವ ಸಿಕ್ಕ ನಂತರ ಮನೆಯ ಇತರೆ ಸಮಸ್ಯೆಗೆ ಬಗ್ಗೆ ಗಮನಹರಿಸೋಣ ಎಂದೂ ಶಾಸಕಿ ಸಮಾಧಾನಪಡಿಸಿದರು.

ಆನಂತರ ಹಳುವಳ್ಳಿ ಮತ್ತು ಬಾಳೆಹೊಳೆ ಬಳಿ ಎನ್ ಡಿ ಆರ್ ಎಫ್ ವತಿಯಿಂದ ಶಮಂತನ ಶವಕ್ಕಾಗಿ ನಡೆಯುತ್ತಿರುವ ಹುಡುಕಾಟವನ್ನು ಅವರು ವೀಕ್ಷಿಸಿದರು. ಕಾಂಗ್ರೆಸ್ ಮುಖಂಡರಾದ ಕೆ.ಆರ್.ಪ್ರಭಾಕರ್, ರಾಜೇಂದ್ರ ಹೆಬ್ಬಾರ್, ವಿಶ್ವನಾಥ್, ಶ್ರೇಣಿಕ, ರಫೀಕ್, ವೀರೇಂದ್ರ, ಮಹೇಶ್ ಇದ್ದರು.
ಕಳಸ ಆಸುಪಾಸಿನ ಭದ್ರಾ ನದಿಯಲ್ಲಿ ಅಗ್ನಿಶಾಮಕ ದಳ, ಬಾಳೆಹೊಳೆ ಮತ್ತು ಹಳುವಳ್ಳಿ ಆಸುಪಾಸಿನಲ್ಲಿ ಎನ್ ಡಿ ಆರ್ ಎಫ್ ತಂಡ ದಿನಿವಿಡೀ ಶವಕ್ಕಾಗಿ ಹುಡುಕಾಟ ನಡೆಸಿತು.
