ಕಳಸ:ಕಳೆದ ಜುಲೈ ತಿಂಗಳಲ್ಲಿ ಪೊಲೀಸರಿಗೆ ಸಿಗದೆ ಪರಾರಿ ಆಗಿದ್ದ ಮೂವರು ದನಕಳ್ಳರನ್ನು ಇಲ್ಲಿನ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ..
ಜುಲೈ 10ರಂದು ಕಳಸ-ಹೊರನಾಡು ರಸ್ತೆಯ ದಾರಿಮನೆ ಬಳಿ ಜಾನುವಾರು ಸಾಗಿಸುವ ವಾಹನವನ್ನು ಪೊಲೀಸರು ಬೆನ್ನಟ್ಟಿದಾಗ ಕಳ್ಳರು ವಾಹನ ಬಿಟ್ಟು ಪರಾರಿ ಆಗಿದ್ದರು. ಆಗ ವಾಹನ ಮತ್ತು ನಾಲ್ಕು ಜಾನುವಾರುಗಳನ್ನು ಕಳಸ ಪೊಲೀಸರು ವಶಪಡಿಸಿಕೊಂಡಿದ್ದರು.
ಆ ಪ್ರಕರಣದಲ್ಲಿ ಪರಾರಿ ಆಗಿದ್ದ ಕಳ್ಳರ ಪತ್ತೆಗೆ ಕಳಸ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ಗಿರೀಶ್, ಶಿವಕುಮಾರ್, ನಿಖಿಲ್, ಸಿದ್ದಪ್ಪ ಕರಂಡಿ, ಪ್ರಮೋದ್, ವಿನಯ್ ಸತತ ಕಾರ್ಯಾಚರಣೆ ನಡೆಸಿದ್ದರು. ಭದ್ರಾವತಿ ಮೂಲದ ಸಲ್ಮಾನ್ ಖಾನ್(21), ಸಾಹಿಲ್ (21) ಸಯ್ಯದ್ ತೌಫೀಖ್ (32),ಅಬ್ದುಲ್ ಅಜೀಜ್ (34) ಮತ್ತು ಅಬ್ದುಲ್(22) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ತಂಡವು ಜಾನುವಾರು ಕಳ್ಳತನದಲ್ಲಿ ಸತತವಾಗಿ ತೊಡಗಿದ್ದು ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಕೂಡ ಕಳ್ಳತನ ನಡೆಸಿದೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಕಳಸ ಠಾಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ.
