ಕಳಸ:ಕಳಸ ಕೃಷಿ ಮತ್ತು ಪತ್ತಿನ ಸಹಕಾರ ಸಂಘವು ಕಳೆದ ಸಾಲಿನಲ್ಲಿ 488 ಕೋಟಿ ವ್ಯವಹಾರ ನಡೆಸಿ 1.2 ಕೋಟಿ ಲಾಭ ಹಾಗೂ 33.6 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸಂಘದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ಮಾತನಾಡಿ, ಸಂಘವು ಕಚಗಾನೆಯಲ್ಲಿ ಅಡಿಕೆ ಮತ್ತು ಕಾಫಿ ಸಂಸ್ಕರಣಾ ಘಟಕ ಸ್ಥಾಪಿಸಿದ್ದು ಸಂಘದ ಸ್ಥಿರಾಸ್ತಿ ಮೌಲ್ಯ 21 ಕೋಟಿಗೂ ಹೆಚ್ಚಾಗಿದೆ ಎಂದರು.

ಕ್ಯಾಂಪ್ಕೋ ಸಂಸ್ಥೆ ಮೂಲಕ ಬೆಳೆಗಾರರ ಅಡಿಕೆ, ಕಾಳುಮೆಣಸನ್ನು ಗರಿಷ್ಟ ಬೆಲೆಗೆ ಖರೀದಿ ಮಾಡಲಾಗುತ್ತಿದೆ.ಸಂಘದ ಈ ವರ್ಷದ ಲಾಭ 1.20 ಕೋಟಿ ಇದ್ದು ದೊಡ್ಡ ಪಾಲನ್ನು ಸ್ಥಿರಾಸ್ತಿ ಹೆಚ್ಚಿಸಲು ವಿನಿಯೋಗ ಮಾಡಲಾಗುತ್ತಿದೆ ಎಂದರು.
ವಾರ್ಷಿಕ ವರದಿ ಒಪ್ಪಿಸಿದ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ, ಸಂಘದಲ್ಲಿ 3379 ಸದಸ್ಯರಿದ್ದು 56 ಕೋಟಿ ಠೇವಣಿ ಇದೆ.ದುಡಿಯುವ ಬಂಡವಾಳ 92 ಕೋಟಿ ಇದ್ದು ಈ ವರ್ಷ 10 ಕೋಟಿ ಮೌಲ್ಯದ ಸರಕು ಮಾರಾಟ ಮಾಡಿ 91 ಲಕ್ಷ ಲಾಭ ಗಳಿಸಿದೆ ಎಂದರು. ಸಂಘದ ಸದಸ್ಯರಿಗೆ ಕೃಷಿ ಸಾಲ, ದಾಸ್ತಾನು ಸಾಲ, ಅಡಮಾನ ಸಾಲ, ವ್ಯಾಪಾರ ಮತ್ತು ಆಭರಣ ಸಾಲ ನೀಡಲಾಗುತ್ತಿದೆ. 30 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದರು.
ಕಚಗಾನೆಯಲ್ಲಿ 17 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸಂಸ್ಕರಣಾ ಘಟಕದಲ್ಲಿ ಕಳೆದ ಸಾಲಿನಲ್ಲಿ 2.83 ಲಕ್ಷ ಕ್ವಿಂಟಾಲ್ ಹಸಿಅಡಿಕೆ ಸಂಸ್ಕರಣೆ ಮಾಡಲಾಗಿದೆ.ಕೃಷಿಕರ ಜಮೀನಿಗೆ ಬೆಳೆ ವಿಮೆ ಮತ್ತು ಸದಸ್ಯರಿಗೆ ಯಶಸ್ವಿನಿ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಸಂಘದ ಉಪಾದ್ಯಕ್ಷೆ ಆಶಾಲತಾ ಡಿ.ಜೈನ್, ನಿರ್ದೇಶಕರಾದ ಅನಿಲ್ ಡಿಸೋಜ, ನಾರಾಯಣ, ಜಗದೀಶ್ ಗೌಡ, ಮಹೇಶ್ ಕೆ.ಸಿ., ದೇಜಪ್ಪ, ಮಧುವನ್ ಜೈನ್, ರತಿ, ಕೃಷ್ಣಪ್ಪ ಕೆ.ಎಸ್, ಗಾಯತ್ರಿ, ರಾಜೇಂದ್ರ ಭಾಗವಹಿಸಿದ್ದರು.
