ಕಳಸ:ಮರಸಣಿಗೆ ಸಮೀಪದ ಯಮಗೊಂಡ ಎಸ್ಟೇಟಿನಲ್ಲಿ ಕಾಡುಕೋಣ ತಿವಿದು ಮೃತಪಟ್ಟಿದ್ದ ಕಾರ್ಮಿಕ ಚೇತನ್ ಕುಟುಂಬಕ್ಕೆ ಅರಣ್ಯ ಇಲಾಖೆ 20 ಲಕ್ಷ ಪರಿಹಾರ ನೀಡಿದೆ.
ಹೊರನಾಡು ಗ್ರಾಮದ ಕವನಳ್ಳ ಮೂಲದ ತೋಟ ಕಾರ್ಮಿಕ ಚೇತನ್(30) ಮರಸಣಿಗೆ ಸಮೀಪದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡುಕೋಣ ಏಕಾಏಕಿ ದಾಳಿ ಮಾಡಿತ್ತು.ಚೇತನ್ ಎದೆಗೆ ಮತ್ತು ಹೊಟ್ಟೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ರಕ್ತಸ್ರಾವ ಆಗಿತ್ತು. ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು.
ದಾನಿಗಳ ನೆರವಿನಿಂದ ಸಾಕಷ್ಟು ರಕ್ತ ಪೂರೈಸಿದರೂ ಚಿಕಿತ್ಸೆ ಫಲಕಾರಿಯಾಗದೆ ಚೇತನ್ ಮೃತಪಟ್ಟರು. ಮೃತ ಚೇತನ್ ಅವರಿಗೆ ಚಿಕ್ಕ ಮಗು ಇದ್ದು ಪತ್ನಿ ಗರ್ಭಿಣಿ ಆಗಿದ್ದಾರೆ. ಕಳಸ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಡುಕೋಣದ ದಾಳಿ ಬಗ್ಗೆ ಆಕ್ರೋಶ ವ್ಯಕ್ತವಾಗು ದೃಷ್ಟಿಯಿಂದ ಹೆಚ್ಚುವರಿ ಪೊಲೀಸ್ ತುಕಡಿ ಕಳಸ ಆಸ್ಪತ್ರೆ ಆವರಣದಲ್ಲಿ ನಿಗಾ ವಹಿಸಿತ್ತು. ಪೊಲೀಸ್ ವರಿಷ್ಟಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಚಿಕ್ಕಮಗಳೂರು ಅರಣ್ಯ ಸಂರಕ್ಷಣಾಧಿಕಾರಿ ಶಿವಸಾಗರ್, ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಮೃತ ಚೇತನ್ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಅರಣ್ಯ ಇಲಾಖೆಯಿಂದ 20 ಲಕ್ಷ ರೂಪಾಯಿ ಪರಿಹಾರ ಹಣದ ಚೆಕ್ ನೀಡಲಾಯಿತು.ತೋಟದ ಮಾಲೀಕರ ಪರವಾಗಿ ಸಿಬ್ಬಂದಿ ಮೇಯಪ್ಪನ್ 2 ಲಕ್ಷ ರೂಪಾಯಿ ಪರಿಹಾರ ನೀಡಿದರು. ಕಾಂಗ್ರೆಸ್ ಮುಖಂಡರಾದ ಶ್ರೇಣಿಕ, ವಿಶ್ವನಾಥ್ ಇದ್ದರು.
ಕಳಸ ತಾಲ್ಲೂಕಿನಲ್ಲಿ ಮಿತಿ ಮೀರಿದ ಕಾಡುಕೋಣಗಳ ಹಾವಳಿ ಮತ್ತು ಮನುಷ್ಯರ ಮೇಲಿನ ದಾಳಿ ಬಗ್ಗೆ ಜನರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಕಾಡುಕೋಣಗಳನ್ನು ಕಾಫಿ ತೋಟಗಳಿಂದ ಕಾಡಿಗೆ ಅಟ್ಟಬೇಕು ಎಂಬ ಆಗ್ರಹ ಬಲವಾಗಿದೆ.
