ಕಳಸ ಕೆಪಿಎಸ್ ಶಾಲೆ ನಿಯೋಗ ಸೋಮವಾರ ಬೆಂಗಳೂರಿಗೆ ತೆರಳಿ ಶಾಲೆಗೆ 2.07 ಕೋಟಿ ರೂಪಾಯಿ ಅನುದಾನ ಬಡುಗಡೆ ಮಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿತು.
ಕಳಸ ಕೆಪಿಎಸ್ ಶಾಲೆಗೆ ಕಳೆದ ವರ್ಷ ಭೇಟಿ ನೀಡಿದ್ದಾಗ ಆ ಶಾಲೆಯ ಅಭಿವೃದ್ಧಿಗೆ 5 ಕೋಟಿ ಅನುದಾನ ಒದಗಿಸುವಂತೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್ ಮನವಿ ಮಾಡಿದ್ದರು. ಆನಂತರ ರಫೀಕ್ ಸತತವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಶಾಲೆಯ ಅನುದಾನದ ಬೇಡಿಕೆಯನ್ನು ಜೀವಂತವಾಗಿ ಇಟ್ಟಿದ್ದರು. ಈ ತಿಂಗಳು ಶಾಲೆಗೆ ಗರಿಷ್ಟ ಅನುದಾನವಾದ 2.07 ಕೋಟಿ ಬಿಡುಗಡೆ ಆಯಿತು.
ಈ ಹಿನ್ನೆಲೆಯಲ್ಲಿ ಕಳಸ ಕೆಪಿಎಸ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೊಹಮ್ಮದ್ ರಫೀಕ್, ಸದಸ್ಯರಾದ ಸೂಕ್ತ ಗೌಡ, ಸುರೇಶ್, ಶಿಕ್ಷಕರಾದ ಲೋಕೇಶ್ ಸತೀಶ್, ಶಿವಕುಮಾರ್ ಅವರಿದ್ದ ನಿಯೋಗ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿತು. ವಿಧಾನಪರಿಷತ್ತಿನ ಸಭಪತಿ ಬವರಾಜ್ ಹೊರಟ್ಟಿ ಅವರ ಸಮ್ಮುಖದಲ್ಲಿ ಮಧು ಬಂಗಾರಪ್ಪ ಅವರನ್ನು ಶಾಸಕಿ ನಯನಾ ಮೋಟಮ್ಮ ಮತ್ತು ಕೆಪಿಎಸ್ ನಿಯೋಗ ಸನ್ಮಾನಿಸಿತು.
‘ಕಳೆದ ವರ್ಷ ಕಳಸ ಕೆಪಿಎಸ್ ಶಾಲೆಗೆ ಭೇಟಿ ನೀಡಿದ್ದಾಗ ಶಾಲೆಗೆ ಅನುದಾನ ಒದಗಿಸಲು ಮನವಿ ಮಾಡಿದ್ದರು.1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವ ಈ ಶಾಲೆಯು ಎಲ್ಲ ರಂಗದಲ್ಲೂ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಮಧು ಬಂಗಾರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
‘ಗ್ರಾಮೀಣ ಪ್ರದೇಶದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ತಮ್ಮ ಇಚ್ಛೆಗೆ ಅನುಸಾರವಾಗಿ ಕಳಸ ಕೆಪಿಎಸ್ ಶಾಲೆಗೆ 8 ಕೊಠಡಿ ಮತ್ತು 2 ಪ್ರಯೋಗಾಲಯಕ್ಕೆ 2.07 ಕೋಟಿ ರೂಪಾಯಿ ಅನುದಾನ ಒದಗಿಸಿದ್ದೇನೆ.ಈ ಶಾಲೆಯು ಮತ್ತಷ್ಟು ಅಭಿವೃದ್ಧಿ ಹೊಂದಲಿ’ ಎಂದು ಮಧು ಬಂಗಾರಪ್ಪ ಆಶಿಸಿದರು.
ಆನಂತರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್ ಅವರನ್ನು ಸಚಿವರು, ಶಾಸಕಿ ನಯನಾ ಮೋಟಮ್ಮ ಅಭಿನಂದಿಸಿದರು.
