ಕಳಸ:ಇಲ್ಲಿನ ಕಳಸೇಶ್ವರ ದೇವಸ್ಥಾನದಲ್ಲಿ ಭಾನುವಾರ ಮಳೆಗಾಗಿ ಪ್ರಾರ್ಥನೆ ಮತ್ತು ರುದ್ರಾಭಿಷೇಕ, ರುದ್ರಹೋಮ ನೆರವೇರಿಸಲಾಗಿತ್ತು. ಪ್ರಾರ್ಥನೆ ನಡೆದು 4 ಗಂಟೆಗಳಲ್ಲೇ ಮಳೆ ಸುರಿದು ಕೃಷಿಕ ವರ್ಗ ಹರ್ಷಚಿತ್ತರಾದರು.
ಕಳಸೇಶ್ವರ ಸ್ವಾಮಿ ಸನ್ನಿಧಿಯಲ್ಲಿ ರುದ್ರಾಭಿಷೇಕ, ರುದ್ರಹೋಮ, ಸರ್ವಾಂಗಸುಂದರಿ ಅಮ್ಮನವರ ಸನ್ನಿಧಿಯಲ್ಲಿ ಸಹಸ್ರನಾಮ ಕುಂಕುಮಾರ್ಚನೆ, ಆನೆ ವಿಘ್ನೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪಂಚಕಜ್ಜಾಯ ನಿವೇದನೆ, ಕ್ಷೇತ್ರಪಾಲ ಸನ್ನಿಧಿಯಲ್ಲಿ ಚರುಬಲಿ ಸಮರ್ಪಿಸಿ ಆನಂತರ ಕಳಸೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ನೆರವೇರಿಸಲಾಗಿತ್ತು. ಕಳಸೇಶ್ವರ ಸ್ವಾಮಿ ಧಾರ್ಮಿಕ ಸೇವಾ ಪ್ರತಿಷ್ಟಾನವ ವತಿಯಿಂದ ಈ ಪ್ರಾರ್ಥನೆ ಆಯೋಜಿಸಲಾಗಿತ್ತು.
ಶನಿವಾರದಿಂದ ಕವಿದಿದ್ದ ದಟ್ಟವಾದ ಮೋಡ ಮಳೆಯ ನಿರೀಕ್ಷೆ ಮೂಡಿಸಿತ್ತು. ಹಲವಾರು ದಿನಗಳ ಸೆಕೆಯಿಂದ ಬಳಲಿದ್ದ ಜನರಿಗೆ ಈ ಮಳೆ ಆಹ್ಲಾದ ತಂದಿತು. ಬಿಸಿಲಿನಿಂದ ಬಳಲಿದ್ದ ಕಾಫಿ, ಅಡಿಕೆ ತೋಟಗಳಿಗೆ ಮಳೆ ತಂಪು ತಂದಿತು. ಕಳಸ ಸುತ್ತಮುತ್ತಲಿನ ಪ್ರದೇಶದಲ್ಲೂ ಮಳೆ ಆಗಿದ್ದು ಕಾಫಿ ಗಿಡಗಳಲ್ಲಿ ಮುಂದಿನ ವಾರ ಹೂವು ಅರಳುವ ನಿರೀಕ್ಷೆ ಇದೆ. ಅಡಿಕೆ ತೋಟಗಳಿಗೆ ಈ ಮಳೆ ಆಸರೆ ಆಗಿದೆ.
