ಕಳಸ:ನಮ್ಮ ತಾಲ್ಲೂಕಿನಲ್ಲಿ ನೂರಾರು ಪ್ರತಿಭಾವಂತರು ಇದ್ದಾರೆ.ಆದರೆ ಅದಕ್ಕೆ ತಕ್ಕ ನೀರು ಎರೆಯಲು ಅಗತ್ಯವಾದ ಆರ್ಥಿಕ ಸಂಪನ್ಮೂಲ ಇಲ್ಲದೆ ಪ್ರತಿಭೆ ಕಮರುವುದನ್ನು ನಾವು ನೋಡಿದ್ದೇವೆ. ಮರಸಣಿಗೆಯ ಚೌಡಿಬೈಲು ಪ್ರದೇಶದ ಬಡ ಕೂಲಿ ಕಾರ್ಮಿಕ ಕುಟುಂಬದ ಬಾಲಕಿಯ ಪ್ರತಿಭೆ ಮತ್ತು ಛಲಕ್ಕೆ ಆರ್ಥಿಕ ಮತ್ತು ಆರೋಗ್ಯದ ಸಮಸ್ಯೆ ಅಡ್ಡಿಯಾಗಿದೆ.
ಕಳೆದ ತಿಂಗಳು ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿ ಒಬ್ಬಳನ್ನು ಆಕೆಯ ತಂದೆ ನಿತ್ಯವೂ ಹೊತ್ತುಕೊಂಡು ಬಂದು ಪರೀಕ್ಷೆ ಬರೆಸಿ ವಾಪಸ್ ಕರೆದೊಯ್ಯುತ್ತಿದ್ದರು. ಅದೇ ಬಾಲಕಿ ಮರಸಣಿಗೆ ಮೂಲದ ಶುಭಶ್ರೀ ಎಲ್ಲರ ಅಚ್ಚರಿಗೆ ಕಾರಣ ಆಗುವಂತೆ ಈಗ ಶೇ.90 ಅಂಕ ಪಡೆದು ಎಸ್ಸೆಸ್ಸೆಲ್ಸಿ ತೇರ್ಗಡೆ ಆಗಿದ್ದಾಳೆ.
ಮರಸಣಿಗೆ ಸಮೀಪದ ಚೌಡಿಬೈಲು ಪ್ರದೇಶದ ಗಣೇಶ್ ಮತ್ತು ಪುಷ್ಪಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಹಿರಿಯಳಾದ ಶುಭಶ್ರೀ 7ನೇ ತರಗತಿಯಲ್ಲಿ ಇದ್ದಾಗ ಮೂರ್ಛೆರೋಗದ ಲಕ್ಷಣಗಳು ಕಂಡು ಬಂದವು. ವೈದ್ಯರಲ್ಲಿ ತಪಾಸಣೆ ನಡೆಸಿದಾಗ ರಕ್ತದಲ್ಲಿ ಅತಿಹೆಚ್ಚು ಸಕ್ಕರೆ ಅಂಶ ಮತ್ತು ನರಗಳ ಸಮಸ್ಯೆಯಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಆಗಿರುವುದು ಕಂಡು ಬಂತು. ಆಗಿನಿಂದಲೂ ಈಕೆಯ ಪೋಷಕರು ಸತತವಾಗಿ ಮಗಳಿಗೆ ಚಿಕಿತ್ಸೆ ಕೊಡಿಸುತ್ತಾ ಸುಮಾರು 15 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆ.
ಶುಭಶ್ರೀಯ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬಂದಿದೆ.ಆದರೆ ನರದ ಸಮಸ್ಯೆ ಈಗಲೂ ಗಂಭೀರವಾಗಿಯೇ ಇದೆ. ‘ನನ್ನ ಆರೋಗ್ಯ ಸಂಪೂರ್ಣ ಸರಿ ಆಗುವ ಸಾಧ್ಯತೆ ಶೇ.2 ಮಾತ್ರ’ ಎಂದು ಹೇಳುವ ಶುಭಶ್ರೀ ಜೀವನದಲ್ಲಿ ಭರವಸೆಯನ್ನು ಮಾತ್ರ ಕಳೆದುಕೊಂಡಿಲ್ಲ.

ಈ ನಡುವೆ ಶುಭಶ್ರೀಯ ತಂದೆ ಗಣೇಶ್ ಕೂಡ ಮರದಿಂದ ಬಿದ್ದು ಶಸ್ತ್ರಚಿಕಿತ್ಸೆಗೆ ಒಳಗಾದರು. ಅವರು ಕೂಡ ಗಟ್ಟಿಯಾದ ಕೆಲಸ ಮಾಡಲಾರದೆ ಕೂಲಿಗೂ ಕುತ್ತು ಬಂತು.ತಾಯಿ ಪುಷ್ಪಾ ಕೂಲಿ ಕೆಲಸದಿಂದ ಮನೆ ನಿರ್ವಹಣೆಗೆ ಹೆಗಲು ಕೊಟ್ಟರು. ಆದರೆ ಈ ಸಂಕಷ್ಟಗಳ ನಡುವೆಯೂ ಶುಭಶ್ರೀಯ ವಿದ್ಯಾಭ್ಯಾಸದ ಕನಸು ಮುರುಟಲಿಲ್ಲ.
ಸತತ ಮೂರು ವರ್ಷ ಚಿಕಿತ್ಸೆ ಪಡೆಯುತ್ತಲೇ ಪ್ರೌಢಶಾಲೆ ಮುಗಿಸಿದ ಶುಭಶ್ರೀ ಈಗ ಉನ್ನತ ವ್ಯಾಸಂಗದ ಕಡೆಗೆ ಗಮನ ಹರಿಸಿದ್ದಾಳೆ. ಆದರೆ ಆರ್ಥಿಕ ಮುಗ್ಗಟ್ಟು ಮತ್ತು ಅನಾರೋಗ್ಯದ ಕಾರಣಕ್ಕೆ
ಕಾಲೇಜಿಗೆ ದಾಖಲಾಗುವ ಸ್ಥಿತಿಯಲ್ಲಿ ಆಕೆ ಇಲ್ಲ. ದೇಹದಲ್ಲಿ ಶಕ್ತಿ ಇಲ್ಲದೆ ನಾಲ್ಕಾರು ಹೆಜ್ಜೆ ಹಾಕುವಾಗ ಬಳಲುತ್ತಾಳೆ. ಆದರೂ ಹೇಗಾದರೂ ಸರಿ ವಾಣಿಜ್ಯ ಪದವಿ ಪಡೆದು ಸಿ.ಎ. ಪರೀಕ್ಷೆ ಬರೆದೇ ಬರೆಯುತ್ತೇನೆ ಎಂದು ಶುಭಶ್ರೀ ಛಲತೊಟ್ಟಿದ್ದಾಳೆ.
‘ನನ್ನನ್ನು ಪ್ರತಿದಿನವೂ ಅಪ್ಪನೇ ಹೊತ್ತುಕೊಂಡು ಶಾಲೆಗೆ ಬಿಡುತ್ತಿದ್ದರು. ಇನ್ನು ಬೇರೆ ಊರಿಗೆ ಕಾಲೇಜಿಗೆ ಸೇರಿದರೆ ನನ್ನನ್ನು ಕಾಲೇಜಿಗೆ ಕರೆದುಕೊಂಡು ಹೋಗುವವರು ಯಾರು. ನನಗೆ ಟಾಯ್ಲೆಟ್, ಬಾತ್ರೂಮಿಗೆ ಕೂಡ ಯಾರಾದರೂ ಕರೆದುಕೊಂಡು ಹೋಗಬೇಕು. ಅದಕ್ಕೆ ನಾನು ಕಾಲೇಜು ಸೇರಲು ಆಗಲ್ಲ. ಮನೆಯಲ್ಲೇ ಇದ್ದು ಓದಲು ಆಗುತ್ತದೆಯೇ ಅಂತ ಯೋಚನೆ ಮಾಡ್ತಾ ಇದ್ದೇನೆ’ ಎಂದು ಶುಭಶ್ರೀ ಅಸಹಾಯಕತೆ ಜೊತೆಗೆ ವಿಶ್ವಾಸದಿಂದಲೇ ಹೇಳಿದರು.
ಅನಾರೋಗ್ಯದ ಸಮಸ್ಯೆ ಮೆಟ್ಟಿ ನಿಂತು ಸಿ.ಎ. ಓದುತ್ತೇನೆ ಎಂದು ಪಣ ತೊಟ್ಟಿರುವ ಶುಭಶ್ರೀಯ ಅನಾರೋಗ್ಯ ನಿವಾರಣೆ ಮತ್ತು ವಿದ್ಯಾಭ್ಯಾಸಕ್ಕೆ ಹೃದಯವಂತರು ಆರ್ಥಿಕ ಚೈತನ್ಯ ತುಂಬಬೇಕಿದೆ. ಆಕೆಯ ಯಶಸ್ಸಿಗೆ ಮತ್ತು ಆರೋಗ್ಯಕ್ಕೆ ನಮ್ಮ ಸಣ್ಣ ಪಾಲು ಇರಲಿ ಎಂದು ಮನವಿ ಮಾಡುತ್ತೇನೆ. ಗೂಗ್ಪೇ ಸಂಖ್ಯೆ 9480096240 ಮೂಲಕ ಉದಾರವಾಗಿ ಧನಸಹಾಯ ಮಾಡಬೇಕು ಎಂದು ಕೋರುತ್ತೇನೆ.
ರವಿ ಕೆಳಂಗಡಿ
