ಕಳಸ:ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಈ ವರ್ಷ ದಾಖಲಾಗುವ 80 ಅರ್ಹ ಬಡ ವಿದ್ಯಾರ್ಥಿಗಳ ದಾಖಲಾತಿಯ ಎಲ್ಲ ವೆಚ್ಚ ಭರಿಸುವುದಾಗಿ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರೂ ಆದ ದಾನಿ ಹಿತ್ಲುಮಕ್ಕಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.ಇದರೊಂದಿಗೆ ಅವರು ತಾಲ್ಲೂಕಿನ ಬಡ ವಿದ್ಯಾರ್ಥಿಗಳಲ್ಲಿ ಪದವಿ ಪಡೆಯುವ ಭರವಸೆ ಮೂಡಿಸಿದ್ದಾರೆ.
ಕಳಸದ ಪದವಿ ಕಾಲೇಜಿಗೆ ದಾಖಲಾಗುವ ಇಚ್ಛೆ ಹೊಂದಿರುವ ಅನೇಕ ವಿದ್ಯಾರ್ಥಿಗಳ ಆರ್ಥಿಕ ಸಂಕಷ್ಟದ ಬಗ್ಗೆ ಅರಿವು ಇದೆ. ಯಾವ ಮಕ್ಕಳು ಕೂಡ ಆರ್ಥಿಕ ಸಮಸ್ಯೆಯಿಂದ ವಿದ್ಯೆಯಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ 80 ಮಕ್ಕಳ ಪ್ರವೇಶದ ಎಲ್ಲ ಶುಲ್ಕವನ್ನು ಭರಿಸುತ್ತೇನೆ ಎಂದು ರಾಜೇಂದ್ರ ಪ್ರಸಾದ್ ಪ್ರಕಟಿಸಿದ್ದಾರೆ.

ಕಳಸ ಕಾಲೇಜಿನಲ್ಲಿ ಬಿ.ಎ. ಬಿ.ಕಾಂ. ಮತ್ತು ಬಿ.ಸಿ.ಎ. ಪದವಿಗೆ ಪ್ರವೇಶಾತಿ ಆರಂಭವಾಗಿದ್ದು ಬಿ.ಎ. ತರಗತಿಗೆ 30 ವಿದ್ಯಾರ್ಥಿಗಳು, ಬಿ.ಕಾಂ. ತರಗತಿಯ 30 ವಿದ್ಯಾರ್ಥಿಗಳು ಮತ್ತು ಬಿ.ಸಿ.ಎ. ವಿಭಾಗದ 20 ಮಕ್ಕಳು ಅರ್ಹತೆಗೆ ಅನುಸಾರವಾಗಿ ಈ ಉಚಿತ ಪ್ರವೇಶದ ಸೌಲಭ್ಯ ಪಡೆಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಕಾಲೇಜಿನ ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ, ರಾಜೇಂದ್ರ ಪ್ರಸಾದ್ ಅವರ ಪ್ರಾಯೋಜಕತ್ವದಲ್ಲಿ ಪ್ರಥಮ ವರ್ಷದ ಪದವಿಗೆ ಸೇರುವ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಆದ್ಯತೆ ಮೇರೆಗೆ ಉಚಿತ ಪ್ರವೇಶದ ಅವಕಾಶ ಸಿಗಲಿದೆ. ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಆರ್ಥಿಕ ಹಿನ್ನೆಲೆ ಗಮನಿಸಿ ಅವರಿಗೂ ಮೊದಲ ವರ್ಷದ ಪದವಿಗೆ ಉಚಿತ ಪ್ರವೇಶಾತಿ ಕೊಡುವ ಬಗ್ಗೆ ಆಡಳಿತ ಮಂಡಳಿ ತೀರ್ಮಾನಿಸುತ್ತದೆ.ಮೇ 5ರ ಒಳಗೆ ಅರ್ಹರೆಲ್ಲರೂ ದಾಖಲಾತಿ ಮಾಡಿಸಿಕೊಳ್ಳಬೇಕು ಎಂದರು.
ಕಳೆದ ವರ್ಷ ಕೂಡ ರಾಜೇಂದ್ರ ಪ್ರಸಾದ್ ಅವರು ಮೂರೂ ತರಗತಿಗಳ 100 ಮಕ್ಕಳ ಪ್ರವೇಶ ಶುಲ್ಕ ಭರಿಸಿದ್ದರು. ಈ ವರ್ಷ ಸುಮಾರು 4.5 ಲಕ್ಷ ರೂಪಾಯಿ ವೆಚ್ಚದಲ್ಲಿ 80 ಮಕ್ಕಳ ವಿದ್ಯಾಭ್ಯಾಸಕ್ಕೆ ನೀರು ಎರೆಯುತ್ತಿದ್ದಾರೆ. ಅವರಿಗೆ ಕಾಲೇಜಿನ ಪರವಾಗಿ ಅಭಿನಂದನೆ ಎಂದೂ ವಿನಯ್ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
