ಕಳಸ:ಇಲ್ಲಿನ ನಿವಾಸಿ ವಿದುಷಾ ಜೈನ್ ಪಾಂಡಿಚೆರಿಯಲ್ಲಿ ಗುರುವಾರ ನಡೆದ ದಕ್ಷಿಣ ವಲಯಮಟ್ಟದ ಜೂನಿಯರ್ ಅಥ್ಲೆಟಿಕ್ಸ್ ನಡಿಗೆ ಸ್ಫರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.
ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ 37ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಸ್ಫರ್ಧೆಯಲ್ಲಿ ವಿದುಷಾ 3000 ಮೀಟರ್ ನಡಿಗೆ ಸ್ಫರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. 18ರ ವಯೋಮಾನದವರ ಈ ಕ್ರೀಡಾಕೂಟದಲ್ಲಿ ಕರ್ನಾಟಕ, ಕೇರಳ, ಆಂಧ್ರ, ತೆಲಂಗಾಣ, ತಮಿಳುನಾಡು, ಅಂಡಮಾನ್, ಲಕ್ಷದ್ವೀಪ, ಗೋವಾ ರಾಜ್ಯದ ಕ್ರೀಡಾಪಟುಗಳು ಭಾಗವಹಿಸಿದ್ದರು.

ಇದರೊಂದಿಗೆ ವಿದುಷಾ ಪಂಜಾಬ್ ರಾಜ್ಯದ ಪಾಟಿಯಾಲದಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ.ಈಗಿನ್ನೂ 16ರ ಹರೆಯದ ವಿದುಷಾ 18ರ ವಯೋಮಾನದವರ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು ಆಕೆಗೆ ಭವಿಷ್ಯದಲ್ಲಿ ಬಹಳಷ್ಟು ಅವಕಾಶ ಇದೆ ಎಂದು ಆಕೆಯ ಕೋಚ್ ಕೆಳಗೂರು ರಮೇಶ್ ತಿಳಿಸಿದ್ದಾರೆ.
ಕಳಸ ಚಂದ್ರನಾಥ ಸ್ವಾಮಿ ಬಸದಿ ಬಳಿಯ ನಿವಾಸಿ ವೀಣಾ ಮತ್ತು ಸತ್ಯೇಂದ್ರ ಜೈನ್ ಅವರ ಪುತ್ರಿಯಾದ ವಿದುಷಾ ಸದ್ಯ ಸಂಪಮೇಶ್ವರಪೇಟೆಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಅಧ್ಯಯನ ಮಾಡುತ್ತಿದ್ದಾರೆ.
