ಕಳಸ:ಪೊಲೀಸ್ ಅಧಿಕಾರಿಯೊಬ್ಬರು ಜನಪರ ಕೆಲಸ ಮಾಡುವುದು ಅಂದರೆ ಇಂದಿನ ದಿನದಲ್ಲಿ ಅಪರೂಪದ ಸಂಗತಿ. ಅದರಲ್ಲೂ ಮುಖ್ಯಮಂತ್ರಿ ಚಿನ್ನದ ಪದಕ ಗಳಿಸುವಷ್ಟು ಪರಿಶ್ರಮ ತೋರುವುದು ತೀರಾ ಅಪರೂಪ. ಇಂತಹ ಸನ್ನಿವೇಶದಲ್ಲೂ ಪೊಲೀಸ್ ಅಧಿಕಾರಿಯೊಬ್ಬರು 10 ವರ್ಷದ ಅವಧಿಯಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಗಳಿಸಿದ ಸಾಧನೆ ತೋರಿರುವುದು ಅಪರೂಪದಲ್ಲೇ ಅಪರೂಪ.ಅಂತಹ ಸಾಧನೆ ಮಾಡಿರುವವರು ಕಳಸ ಗುಪ್ತಚರ ಅಧಿಕಾರಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಬಿ.ಎಸ್.ಗಿರೀಶ್.
ಬಿ.ಎಸ್.ಗಿರೀಶ್ ಸಾಧನೆ ಮನಗಂಡು ಅವರಿಗೆ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಮಾಡಲಿದೆ.ಏಪ್ರಿಲ್ 2 ರಂದು ಬೆಂಗಳೂರಿನಲ್ಲಿ ನಡೆಯುವ ಪೊಲೀಸ್ ಧ್ವಜ ದಿನಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಚಿನ್ನದ ಪದಕ ಪ್ರದಾನ ಮಾಡಲಿದ್ದಾರೆ.ನಕ್ಸಲರು ಶರಣಾಗತಿಯಾಗಿ ಮುಖ್ಯವಾಹಿನಿಗೆ ಮರಳುವಲ್ಲಿ ಶ್ರಮ ತೋರಿದ 22 ವಿವಿಧ ಪೊಲೀಸ್ ಅಧಿಕಾರಿಗಳಿಗೆ ಚಿನ್ನದ ಪದಕ ಘೋಷಣೆ ಮಾಡಲಾಗಿದೆ. ನಾಡಿನ ಪ್ರಮುಖ ನಕ್ಸಲರ ಶರಣಾಗತಿ ವೇಳೆಗೆ ಕೋಟೆಹೊಂಡ ರವೀಂದ್ರ ಎಂಬ ನಕ್ಸಲ್ ಶರಣಾಗತಿಯಲ್ಲಿ ಗಿರೀಶ್ ಪ್ರಮುಖ ಪಾತ್ರ ವಹಿಸಿದ್ದರು.
ಜಯಪುರ ಮೂಲದ ಗಿರೀಶ್ ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯಲ್ಲಿ, ಜಯಪುರದಲ್ಲಿ ಮತ್ತು ನಕ್ಸಲ್ ನಿಗ್ರಹ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿ ಹೆಸರು ಮಾಡಿದವರು.2015ರಲ್ಲಿ ಕೂಡ ಮುಖ್ಯಮಂತ್ರಿ ಚಿನ್ನದ ಪದಕ ಗಳಿಸಿದ್ದ ಅವರಿಗೆ ಎರಡನೇ ಬಾರಿ ಮತ್ತೆ ಅದೇ ಗೌರವ ಒಲಿದು ಬಂದಿದೆ.
ಹೀಗೆ ಎರಡು ಬಾರಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಜಿಲ್ಲೆಯ ಮೊದಲ ಪೊಲೀಸ್ ಅಧಿಕಾರಿ ಅವರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
