ಕಳಸ:ಇಲ್ಲಿನ ಜೆಇಎಂ ಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪ್ರೌಢಶಾಲಾ ಕೊಠಡಿಗಳು ಮತ್ತು ಸಭಾಂಗಣದ ಉದ್ಘಾಟನೆ ಭಾನುವಾರ ನಡೆಯಿತು.
ದಾನಿ ತನೂಡಿ ಜಗದೀಶ್ ಹೆಗ್ಗಡೆ ತಾವು ದೇಣಿಗೆ ನೀಡಿದ್ದ 25 ಲಕ್ಷ ರೂಪಾಯಿಯಲ್ಲಿ ನಿರ್ಮಾಣವಾದ ಪ್ರೌಢಶಾಲೆ ವಿಭಾಗದ ಕೊಠಡಿಗಳು ಮತ್ತು ಕಚೇರಿ ಉದ್ಘಾಟಿಸಿದರು.ಹೊರನಾಡಿನ ಜಿ.ಭೀಮೇಶ್ವರ ಜೋಷಿ ಮತ್ತು ರಾಜಲಕ್ಷ್ಮಿ ಜೋಷಿ ಸಭಾಂಗಣ ಉದ್ಘಾಟಿಸಿದರು.
ಆನಂತರ ನಡೆದ ಸಭೆಯಲ್ಲಿ ಮಾತನಾಡಿದ ಜಗದೀಶ್ ಹೆಗ್ಗಡೆ, ಜೆಇಎಂ ಶಾಲೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ.ಗ್ರಾಮೀಣ ಪ್ರದೇಶದ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಅನುಕೂಲ ಹೊಂದಲಿ. ಶಾಲೆಗೆ ಅಗತ್ಯವಿದ್ದರೆ ಇನ್ನಷ್ಟು ನೆರವು ಕೊಡಲು ಸಿದ್ಧ ಎಂದು ಪ್ರಕಟಿಸಿದರು.
ಶಾಲೆಯ ಕಾರ್ಯದರ್ಶಿ ಗೋಪಿನಾಥ ಪೈ ಮಾತನಾಡಿ, 1980ರಲ್ಲಿ ಪುಟ್ಟ ಕೊಠಡಿಯಲ್ಲಿ 15 ಮಕ್ಕಳ ಜೊತೆಗೆ ಶುರುವಾದ ಶಾಲೆಯಲ್ಲಿ ಇಂದು 770 ಮಕ್ಕಳು ಇದ್ದಾರೆ. ಶಾಲೆಯಲ್ಲಿ ಕ್ರೀಡಾಂಗಣ, ಪ್ರಯೋಗಾಲಯ, ಗ್ರಂಥಾಲಯ, ಸ್ಮಾರ್ಟ್ ಕಲಿಕಾ ಕೊಠಡಿ, ಸಭಾಂಗಣ ಸೇರಿದಂತೆ ಎಲ್ಲ ಸುಸಜ್ಜಿತ ಸೌಲಭ್ಯಗಳು ಇವೆ ಎಂದರು.

ಜಿ.ಭೀಮೇಶ್ವರ ಜೋಷಿ ಮಾತನಾಡಿ, ಶಾಲೆಯ 45 ವರ್ಷದ ಪಯಣದಲ್ಲಿ ಕಾರ್ಯದರ್ಶಿ ಗೋಪಿನಾಥ ಪೈ ಅವರ ನಿಸ್ವಾರ್ಥ ಸೇವೆ ಅನುಪಮವಾದುದು. ಈ ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾರ್ಜನೆ ಜೊತೆಗೆ ಮೌಲ್ಯಗಳನ್ನು, ಸಂಸ್ಕಾರವನ್ನು ಕೂಡ ಕಲಿಸಲಾಗುತ್ತಿದೆ ಎಂದು ಶ್ಲಾಘಿಸಿದರು.
ರಾಜಲಕ್ಷ್ಮಿ ಜೋಷಿ ಮಾತನಾಡಿ, ಈ ಶಾಲೆ ಎಲ್ಲ ಸೌಲಭ್ಯ ಪಡೆದುಕೊಳ್ಳಲು 45 ವರ್ಷ ಬೇಕಾಯಿತು.ಇದಕ್ಕೆ ಆಡಳಿತ ಮಂಡಳಿಯ ಸ್ವಾಭಿಮಾನಿ ಸ್ವಭಾವ ಕಾರಣ ಎಂದರು. ಕಾರ್ಯದರ್ಶಿ ಗೋಪಿನಾಥ ಪೈ ಅವರನ್ನು ಸನ್ಮಾನಿಸಿದ ಕಳಸ ಸಹಕಾರ ಬ್ಯಾಂಕ್ ಅಧ್ಯಕ್ಷ ಮಂಜಪ್ಪಯ್ಯ, ಕಳಸ ತಾಲ್ಲೂಕಿನ ಎಲ್ಲರ ಕೈಗೆ ಎಟುಕುವಂತೆ ಯಾವುದೇ ಲಾಭದ ಆಸೆಯಿಲ್ಲದೆ ಶಾಲೆ ನಡೆಸಲಾಗುತ್ತದೆ. ಈ ಶಾಲೆ ಕಳಸದ ಆಸ್ತಿ ಎಂದರು.

ಕಳಸ ಎಜುಕೇಶನ್ ಸೊಸೈಟಿ ಅಧ್ಯಕ್ಷ ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು.ಸದಸ್ಯರಾದ ಆಂಟೋನಿ, ಗುರುದತ್, ಸುರೇಶ್, ಅಣ್ಣಯ್ಯ,ಭರತ್ ಹೆಬ್ಬಾರ್, ಸದಾನಂದ ಭಟ್,ಪ್ರಾಥಮಿಕ ಶಾಲಾ ಮುಖ್ಯೋಫಾಧ್ಯಾಯನಿ ಕುಶಲಾ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪ್ರವೀಣ್, ಶಿಕ್ಷಕ ಪ್ರಶಾಂತ್ ಭಾಗವಹಿಸಿದ್ದರು.
ಶಾಲೆಯ ಕಟ್ಟಡ ನಿರ್ಮಾಣ ಮಾಡಿದ ಎಂಜಿನಿಯರ್ ಮಹೇಂದ್ರ ಮತ್ತು ಪ್ರತಿಭಾವಂತ ಕ್ರೀಡಾಪಟುಗಳು ಮತ್ತು ವಿವಿಧ ಸ್ಫರ್ದೆಗಳಲ್ಲಿ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಆನಂತರ ಮಕ್ಕಳು ವೈವಿಧ್ಯಮಯ ಸಾಂಸ್ಕ್ರತಿಕ ಪ್ರದರ್ಶನ ನೀಡಿದರು.
