ಕಳಸ:ಕನಿಷ್ಟ 10 ಕೋಟಿ ರೂಪಾಯಿ ಬಂಡವಾಳ ಮತ್ತು 3 ವರ್ಷದ ಕಾಯುವಿಕೆಗೆ ಸಿದ್ದವಿದ್ದರೆ ಮಾತ್ರ ಕಾಫಿ ರಫ್ತು ವಹಿವಾಟು ನಡೆಸಬಹುದು ಎಂದು ಕೊಪ್ಪದ ಕಾಫಿ ಉದ್ಯಮಿ ಗೋಳಗಾರ್ ಪ್ರಸನ್ನ ಕಿವಿಮಾತು ಹೇಳಿದರು.
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಕಾಫಿ ಮಂಡಳಿ ಆಶ್ರಯದಲ್ಲಿ ಶುಕ್ರವಾರ ನಡೆದ ಇಂಡಿಯನ್ ಕಾಫಿ ಆಪ್ ನೊಂದಣಿ ಮತ್ತು ಕಾಫಿ ಗುಣಮಟ್ಟ ಹಾಗೂ ರಫ್ತು ಬಗೆಗಿನ ಉಪನ್ಯಾಸನದಲ್ಲಿ ಪ್ರಸನ್ನ ಮಾತನಾಡಿದರು.
ನೆರಳಿನಲ್ಲಿ ಬೆಳೆದ ಕಾಫಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುತ್ತಿದೆ. ಕನಿಷ್ಟ 30ರಷ್ಟು ನೆರಳು ಇರುವ ಬಗ್ಗೆ ಬೆಳೆಗಾರರು ಗಮನ ಹರಿಸಬೇಕು. ಭಾರತದ ಸಾವಯವ ಕಾಫಿಗೆ ಶೇ.25 ಹೆಚ್ಚಿನ ಬೆಲೆ ಸಿಗುತ್ತದೆ.ಫೇರ್ ಟ್ರೇಡ್ ಒಪ್ಪಂದಂತೆ ಕಾಫಿಗೆ ಕಿಲೋ ಒಂದಕ್ಕೆ 38 ರೂಪಾಯಿ ಹೆಚ್ಚುವರಿ ಸಿಗುತ್ತದೆ.ಒಂದು ಕಂಟೈನರ್ ಎಂದರೆ ಕನಿಷ್ಟ 20 ಸಾವಿರ ಚೀಲ ರಫ್ತು ಮಾಡಬೇಕಾಗುತ್ತದೆ ಎಂದು ವಿವರಿಸಿದರು.
ಕಾಫಿಗೆ ಹಾನಿಕಾರಕ ರಸಾಯನಿಕ ಬಳಸಬಾರದು. ತೋಟದಲ್ಲಿ ಕನಿಷ್ಟ ಶೇ.2 ಸಾವಯವ ಇಂಗಾಲ ಇರುವಂತೆ ನೋಡಬೇಕು.ತೋಟದಲ್ಲಿ ಸಿಲ್ವರ್ ಮರಗಳ ಬದಲು ಎಕರೆಗೆ ಕನಿಷ್ಟ 40 ಸ್ಥಳೀಯ ಮರ ಬೆಳೆಸಬೇಕು. ಗ್ಲೈಫೋಸೇಟ್ ಕಳೆನಾಶಕ ಮಣ್ಣಿನಲ್ಲಿ 125 ವರ್ಷಗಳ ಕಾಲ ಉಳಿಯುತ್ತದೆ.ದೇಹದಲ್ಲಿ ಮೂರೇ ವರ್ಷದಲ್ಲಿ ಕ್ಯಾನ್ಸರ್ ತರುತ್ತದೆ ಎಂದು ಎಚ್ಚರಿಸಿದರು.
.
ಕಾಫಿ ಮಂಡಳಿ ಕಿರಿಯ ಸಂಪರ್ಕ ಆಧಿಕಾರಿ ಸುರೇಂದ್ರ ಮಾತನಾಡಿ, ಇಂಡಿಯನ್ ಕಾಫಿ ಆಪ್ ಬಳಸಿ ಬೆಳೆಗಾರರು ಕಾಫಿ ಮಂಡಳಿಯ ಸೇವೆ ಮತ್ತು ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದು ಎಂದರು. ಯೂರೋಪಿಯನ್ ಒಕ್ಕೂಟದ ಪರಿಸರ ಕಾಯ್ದೆ ಪ್ರಕಾರ ಅರಣ್ಯ ಕಡಿದು ಕಾಫಿ ಕೃಷಿ ಮಾಡಿದರೆ ಅಂತಹ ದೇಶದಿಂದ ಅದು ಕಾಫಿ ಆಮದು ಮಾಡಿಕೊಳ್ಳುವುದಿಲ್ಲ. ಆದ್ದರಿಂದ ಬೆಳೆಗಾರರು ಆನ್ಲೈನ್ ಮೂಲಕ ತಮ್ಮ ತೋಟದ ಗಡಿ ಗುರುತು ಮಾಡಿಸಿಕೊಂಡರೆ ಮುಂದಿನ ವರ್ಷಗಳಲ್ಲಿ ಕಾಫಿ ರಫ್ತು ಸುಲಭ ಆಗುತ್ತದೆ ಎಂದರು.
ಸಂಘದ ಅಧ್ಯಕ್ಷ ಮಂಜಪ್ಪಯ್ಯ, ಉಪಾಧ್ಯಕ್ಷೆ ಆಶಾಲತಾ ಜೈನ್, ಕಾರ್ಯನಿರ್ವಹಣಾಧಿಕಾರಿ ಮಹಾಬಲ ಭಟ್, ತೋಟದೂರು ಸಹಕಾರ ಸಂಘದ ಅಧ್ಯಕ್ಷ ಹಿತ್ತಲಮಕ್ಕಿ ರಾಜೇಂದ್ರ ಭಾಗವಹಿಸಿದ್ದರು.
