ಕಳಸ:3 ದಶಕದ ಹಿಂದೆ ಕಳಸದಲ್ಲಿ ನಡೆಯುತ್ತಿದ್ದ ಹೋಬಳಿ ಮಟ್ಟದ ಶಾಲಾ ಕ್ರೀಡಾಕೂಟಗಳಲ್ಲಿ ಕಳಸ, ಗಂಗನಕೊಡಿಗೆ, ಹಿರೇಬೈಲು ಸರ್ಕಾರಿ ಶಾಲೆಗಳ ಕ್ರೀಡಾಪಟುಗಳ ನಡುವೆ ಜಿದ್ದಾಜಿದ್ದಿ ಇರುತ್ತಿತ್ತು. ಕ್ರೀಡಾಪಟುಗಳ ಬೆನ್ನಿಗೆ ನಿಂತು ಸ್ಥಳೀಯರು, ತರಬೇತುದಾರರು ಯುದ್ಧವನ್ನೇ ಮಾಡಲು ಸಜ್ಜಾಗುತ್ತಿದ್ದರು. ಆ ಕೂಟದಲ್ಲಿ ಗೆದ್ದಾಗ ಬೀಗುತ್ತಿದ್ದರು. ಇದೀಗ ಕಳಸದ ಇಬ್ಬರು ಕ್ರೀಡಾಪಟುಗಳು ರಾಷ್ಟ್ರಮಟ್ಟದವರೆಗೆ ತಲುಪಿದ್ದು ದಶಕಗಳ ಹಿಂದಿನ ರೋಮಾಂಚನವನ್ನು ನೂರ್ಮಡಿ ಮಾಡಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕಳಸ ಜೆಇಎಂ ಶಾಲೆಯ ವಿದುಷಾ ಬಾಲಕಿಯರ ವಿಭಾಗದ 17 ವರ್ಷದೊಳಗಿನವರ ವಿಭಾಗದ 5000 ಮೀಟರ್ ವೇಗದ ನಡಿಗೆಯಲ್ಲಿ ಚಿನ್ನದ ಸಾಧನೆ ಮಾಡಿದ್ದಾಳೆ. ಕಳೆದ ವರ್ಷ ವಿದುಷಾ ಇದೇ ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನ ಗಳಿಸಿ ಕೂದಲೆಳೆಯಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಅವಕಾಶವಂಚಿತಳಾಗಿದ್ದಳು.
ಈ ಬಾರಿ ತರಬೇತುದಾರ ಪ್ರಶಾಂತ್ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮ ಮಾಡಿದ್ದ ವಿದುಷಾ ರಾಜ್ಯಮಟ್ಟದಲ್ಲಿ ಅಗ್ರಸ್ಥಾನದ ಜೊತೆಗೆ ಚಿನ್ನದ ಪದಕ ಗಳಿಸಿದ್ದಾಳೆ.ಕಳಸದ ವೀಣಾ ಜೈನ್ ಮತ್ತು ಸತ್ಯೇಂದ್ರ ಜೈನ್ ದಂಪತಿಯ ಮಗಳಾದ ವಿದುಷಾ ಇದೀಗ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.
ಜೆಇಎಂ ಶಾಲೆಯ ಮತ್ತೋರ್ವ ವಿದ್ಯಾರ್ಥಿ 10 ನೇ ತರಗತಿಯ ಮೊಹಮ್ಮದ್ ಫಾರಿಸ್ ಕೂಡ ಬಾಲಕರ ವಿಭಾಗದ 5000 ವೇಗದ ನಡಿಗೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದಾನೆ. ಸಂಸೆಯ ಫಾರುಕ್-ಅಬಿಬಾ ದಂಪತಿಯ ಮಗನಾದ ಫಾರಿಸ್ ಕೂಡ ತರಬೇತುದಾರರಾದ ಹೆಚ್.ಆರ್.ಪ್ರಶಾಂತ್ ಕಟ್ಟುನಿಟ್ಟಿನ ಮಾರ್ಗದರ್ಶನದಲ್ಲಿ ಪಳಗಿದ್ದನು. ಮುಂದಿನ ವಾರ ಉತ್ತರಪ್ರದೇಶದ ಲಕ್ನೋ ನಗರದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ವಿದುಷಾ ಮತ್ತು ಫಾರಿಸ್ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಲಿದ್ದಾರೆ.
ಈ ಎರಡೂ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲೂ ಪದಕ ಗಳಿಸಿ ಕಳಸದ ಕೀರ್ತಿ ಪಸರಿಸಲಿ ಎಂಬುದು ‘ವಾಯ್ಸ್ ಆಫ್ ಕಳಸ’ ಹಾರೈಕೆ.ದೈಹಿಕ ಶಿಕ್ಷಕ ಅಲ್ಲದಿದ್ದರೂ ಪ್ರಶಾಂತ್ ಎಂಬ ಅತೀವ ಬದ್ಧತೆ ಮತ್ತು ಅನನ್ಯ ಜೀವನ ಪ್ರೀತಿಯ ಕನ್ನಡ ಮೇಷ್ಟ್ರ ಶ್ರಮದಿಂದಾಗಿ ಕಳಸದ ಇಬ್ಬರು ಮಕ್ಕಳು ರಾಷ್ಟ್ರ ಮಟ್ಟಕ್ಕೆ ಹೋಗುತ್ತಿರುವುದು ಕೂಡ ಸ್ತುತ್ಯರ್ಹ ಸಂಗತಿ ಆಗಿದೆ.
