ಕಳಸ:ಭಾರತ ಕಮ್ಯುನಿಸ್ಟ್ ಪಕ್ಷ ಎಂದರೆ ಗೋಪಾಲ ಶೆಟ್ಟಿ, ಗೋಪಾಲ ಶೆಟ್ಟಿ ಎಂದರೆ ಕಮ್ಯುನಿಸ್ಟ್ ಪಕ್ಷ ಎಂಬಷ್ಟರ ಮಟ್ಟಿಗೆ ಗೋಪಾಲ ಶೆಟ್ಟರು ಕಳಸದಲ್ಲಿ ಹೆಸರಾಗಿದ್ದಾರೆ.
ಕಳೆದ 4 ದಶಕದಿಂದ ಕಳಸ ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ ಗೋಪಾಲ ಶೆಟ್ಟರು ಪಕ್ಷಕ್ಕಾಗಿ ವಿರಮಿಸದೆ ದುಡಿದವರು, ಆಳುವ ವರ್ಗದ ಮತ್ತು ಬೆಳೆಗಾರರ ವರ್ಗದಲ್ಲಿ ಗೋಪಾಲ ಶೆಟ್ಟರು ಅನೇಕ ಬಾರಿ ವಿರೋಧ ಕಟ್ಟಿಕೊಂಡು ಹಲವಾರು ಮೊಕದ್ದಮೆಗಳನ್ನು ದಾಖಲಿಸಿಕೊಂಡವರು, ಜೈಲುವಾಸವನ್ನೂ ಮಾಡಿದ್ದವರು. ಸಿಪಿಐ ಪಕ್ಷಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಕ್ಷದೊಂದಿಗಿನ ತಮ್ಮ ನಂಟಿನ ಬಗ್ಗೆ ಗೋಪಾಲ ಶೆಟ್ಟರು ಬರೆದಿರುವ ಲೇಖನ ಇಲ್ಲಿದೆ.
‘1982ರಲ್ಲಿ ನಾನು ನನ್ನ 22ನೇ ವಯಸ್ಸಿನಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದೆ. ಆದರೆ ಅಲ್ಲಿನ ವಾತಾವರಣ ಸರಿ ಕಾಣದಿದ್ದುದರಿಂದ ಪಕ್ಷ ಬಿಟ್ಟು ಬಿ.ಕೆ.ಸುಂದರೇಶ್ ನೇತೃತ್ವದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಸೇರಿದೆ. ಆಗ ನಾನು ಎಐ ಟಿಯುಸಿ ಕರ್ನಾಟಕ ಎಸ್ಟೇಟ್, ಹೋಟೆಲ್ ಕೆಲಸಗಾರರ ಸಂಘದ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದೆ.
1984ರ ಕಾಲ. ಆಗ ಎಲ್ಲ ದೊಡ್ಡ ತೋಟದಲ್ಲೂ ನೂರಾರು ಕಾರ್ಮಿಕರು ಶಾಶ್ವತವಾಗಿ ಲೈನ್ಗಳಲ್ಲಿ ಇದ್ದರು.ಸರ್ಕಾರ ನಿಗದಿ ಮಾಡಿದ್ದ ಯಾವುದೇ ಸೌಲಭ್ಯವನ್ನು ತೋಟದ ಆಡಳಿತ ವರ್ಗ ಕಾರ್ಮಿಕರಿಗೆ ಕೊಡುತ್ತಿರಲಿಲ್ಲ. ದಿನಕ್ಕೆ 10-12 ಗಂಟೆ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದರು. ಕಾರ್ಮಿಕರು ತಮ್ಮ ಇಷ್ಟದ ಬಟ್ಟೆ, ಚಪ್ಪಲಿ ತೊಡುವ ಸ್ವಾತಂತ್ರ್ಯವೂ ಇರಲಿಲ್ಲ. ಅವರ ವಾಸದ ಮನೆಗಳು ಧೂಳು, ತಿಗಣೆ ತುಂಬಿದ ಕೊಟ್ಟಿಗೆಗಳಂತೆ ಇದ್ದವು. ಆಗ ಪೊಲೀಸ್ ಇಲಾಖೆ ಕೂಡ ತೋಟದ ಮಾಲೀಕರ ಜೊತೆ ಶಾಮೀಲಾಗಿ ಕಾರ್ಮಿಕರಿಗೆ ನ್ಯಾಯ ಕೊಡಿಸುತ್ತಿರಲಿಲ್ಲ.
ಇಂತಹ ಕಿರುಕುಳ, ಶೋಷಣೆ ತಡೆಯಲಾರದೆ ಕೆಲ ಕಾರ್ಮಿಕರು ನಮ್ಮ ಕಾರ್ಮಿಕ ಸಂಘಟನೆಗಳತ್ತ ವಾಲುತ್ತಿದ್ದರು. 80ರ ದಶಕದಲ್ಲಿ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮತ್ತು ಆಗಿನ ಕಾರ್ಮಿಕರ ಹೋರಾಟದಲ್ಲಿ ಸಂಚಲನ ಮೂಡಿಸಿದ್ದ ಬಿ.ಕೆ.ಸುಂದರೇಶ್ ಕಾರ್ಮಿಕರ ಪಾಲಿಗೆ ಆಶಾಕಿರಣ ಆಗಿದ್ದರು. ಇವರೊಂದಿಗೆ ಹೆಚ್.ಎಂ.ರೇಣುಕಾರಾಧ್ಯ , ಪಿ.ವಿ. ಲೋಕೇಶ್, ಕೆ.ಬಿ. ನಾಣಯ್ಯ ಕೂಡ ಹೆಗಲು ಕೊಡುತ್ತಿದ್ದರು.
ಈ ನಾಲ್ವರ ದಿಟ್ಟ ಹೋರಾಟ ಜಿಲ್ಲೆಯ ಹೋಟೆಲ್ಗಳಲ್ಲಿ ದುಡಿಯುತ್ತಿದ್ದ ಬಾಲ ಕಾರ್ಮಿಕರ ಬದುಕನ್ನೇ ಬದಲಾಯಿಸಿತು. ತೋಟ ಕಾರ್ಮಿಕರನ್ನು ಕೂಡ ಇವರು ಸಂಘಟಿಸಿ ಕಾರ್ಮಿಕರಿಗೆ ನ್ಯಾಯವಾಗಿ ಸಿಗಬೇಕಿದ್ದ ಎಲ್ಲ ಸವಲತ್ತು ಕೊಡಿಸಿದರು. ತೋಟ ಕಾರ್ಮಿಕರು ನಿವೃತ್ತಿ ನಂತರ ಸ್ವತಂತ್ರ ಬದುಕು ರೂಪಿಸಿಕೊಳ್ಳಲು ಅಗತ್ಯ ವೇದಿಕೆ ನಮ್ಮ ಪಕ್ಷದ ಹೋರಾಟದಿಂದ ಸೃಷ್ಟಿಯಾಯಿತು.
ಆನಂತರ 1983ರಲ್ಲಿ ಸಿಪಿಐ ಪಕ್ಷವು ಜನತಾದಳ ಜೊತೆ ಗುರುತಿಸಿಕೊಂಡು ಕಾಂಗ್ರೆಸ್ ವಿರೋಧಿ ಪಾಳೆಯ ಗಟ್ಟಿಗೊಳಿಸಿತು. ಬಿ.ಕೆ.ಸುಂದರೇಶ್ ಸಂಯುಕ್ತ ರಂಗದ ಅಭ್ಯರ್ಥಿಯಾಗಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಕಾಂಗ್ರೆಸ್ಗೆ ತೀವ್ರ ಸ್ಪರ್ಧೆ ಒಡ್ಡಿದರು. ಆನಂತರ ಸುಂದರೇಶ್ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲೂ ಸ್ಪರ್ಧಿಸಿ ಕೇವಲ 700 ಮತಗಳ ಅಂತರದಿಂದ ಕಾಂಗ್ರೆಸ್ನ ಸಗೀರ್ ಅಹಮದ್ ವಿರುದ್ಧ ಸೋತರು.
ಆನಂತರ 1994ರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪರವಾದ ಅಧ್ಯಯನ ಮತ್ತು ಹೋರಾಟದಲ್ಲಿ ಸುಂದರೇಶ್ ಭಾಗವಹಿಸಿದ್ದರು. ದುರದೃಷ್ಟವಶಾತ್ ಬೆಂಗಳೂರು ಸಮೀಪ ರೈಲು ಅಪಘಾತದಲ್ಲಿ ಸುಂದರೇಶ್ ಮರಣ ಹೊಂದಿದಾಗ ಇಡೀ ಜಿಲ್ಲೆಯೇ ಶೋಕ ವ್ಯಕ್ತಪಡಿಸಿತ್ತು. ಅಂತಹ ಧೀಮಂತ ನಾಯಕನ ಜೊತೆ ಕೆಲಸ ಮಾಡಿದ ಹೆಮ್ಮ ನನ್ನದು.
ಆನಂತರ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಸಾತಿ ಸುಂದರೇಶ್ ಮೂರು ಬಾರಿ ಸ್ಪರ್ಧಿಸಿ ದೊಡ್ಡ ಮಟ್ಟದಲ್ಲೇ ಮತ ಗಳಿಸಿದರು. ನಮ್ಮ ಪಕ್ಷವು ಜಿಲ್ಲಾ ಪಂಚಾಯಿತಿ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಸತತವಾಗಿ ಸ್ಪರ್ಧಿಸಿ ಅಲ್ಲಲ್ಲಿ ಗೆಲ್ಲುತ್ತಲೇ ಇದೆ. 4 ದಶಕಗಳ ನಂತರವೂ ನಮ್ಮ ಪಕ್ಷ ಬಡವರ, ಕಾರ್ಮಿಕರ, ದಲಿತರ ಮತ್ತು ದಮನಿತರ ಪರವಾಗಿ ಹೋರಾಟ ರೂಪಿಸುತ್ತಲೇ ಇದೆ.
ನನ್ನ 44 ವರ್ಷದ ರಾಜಕೀಯ ಅನುಭವದಲ್ಲಿ ಎಂ.ಕೆ.ಲಕ್ಷ್ಮಣ್, ರಘುವೀರ ಮತ್ತಿತರರ ಜೊತೆ ಕಾರ್ಮಿಕರ ಪರವಾಗಿ ಹೋರಾಟ ಮಾಡಿದಾಗ 5-6 ತಿಂಗಳು ಸೆರೆವಾಸ ಕೂಡ ಅನುಭವಿಸಿದ್ದೇನೆ. ಭಾರತ ಕಮ್ಯುನಿಸ್ಟ್ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾಗಿ ನಮಗೆ ಕೆಲಸ ಮಾಡಲು ಪ್ರೇರಣೆ ಕೊಟ್ಟ ಆಗಿನ ಶಾಸಕ ಎಂ.ಎಸ್.ಕೃಷ್ಣನ್ ಮತ್ತಿತರ ಎಲ್ಲ ನಾಯಕರನ್ನು ನೆನಪಿಸಿಕೊಂಡು ಭಾರತದಲ್ಲಿ ದುಡಿಯುವ ವರ್ಗದ ಪರವಾದ ಸರ್ಕಾರ ಬರಲಿ ಎಂದು ಆಶಿಸುತ್ತಿದ್ದೇನೆ.
ಗೋಪಾಲ ಶೆಟ್ಟಿ, ಸಿಪಿಐ, ಕಳಸ
