ಕಳಸ:ಎಸ್.ಕೆ.ಬಾರ್ಡರ್-ಕುದುರೆಮುಖ-ಕಳಸ-ಕೊಟ್ಟಿಗೆಹಾರ ರಸ್ತೆ ಮತ್ತು ಹೊರನಾಡು-ಕಳಸ-ಸುಬ್ರಮಣ್ಯ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದ ಜೆಡಿಎಸ್ ಯುವ ಮುಖಂಡ ಪ್ರಸಾದ್ ಜೈನ್ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಆಗ್ರಹಿಸಿದ್ದಾರೆ..
ದೆಹಲಿಯಲ್ಲಿ ಸಂಸದರನ್ನು ಗುರುವಾರ ಭೇಟಿ ಮಾಡಿದ ಪ್ರಸಾದ್, ಕಳಸ ತಾಲ್ಲೂಕಿನಲ್ಲಿ ಹಾದು ಹೋಗುವ ಎಸ್.ಕೆ.ಬಾರ್ಡರ್-ಕುದುರೆಮುಖ-ಕಳಸ-ಮಾಗುಂಡಿ-ಬಾಳೂರು-ಕೊಟ್ಟಿಗೆಹಾರ ರಸ್ತೆಯು ಹಲವಾರು ವರ್ಷಗಳಿಂದ ಅನುದಾನದ ಕೊರತೆಯಿಂದ ದುರವಸ್ಥೆಯಲ್ಲಿದೆ. ಈ ರಸ್ತೆಯ ಬಳಕೆದಾರರು ಹದಗೆಟ್ಟ ರಸ್ತೆಯಿಂದಾಗಿ ಹೈರಾಣಾಗಿದ್ದಾರೆ. ಪ್ರವಾಸಿಗರು ಈ ರಸ್ತೆ ಬಳಸಲು ಹಿಂದೇಟು ಹಾಕುತ್ತಿದ್ದು ಪ್ರವಾಸೋದ್ಯಮಕ್ಕು ಹೊಡೆತ ಬಿದ್ದಿದೆ ಎಂದು ವಿವರಿಸಿದ್ಧಾರೆ.
ಹೊರನಾಡು-ಕಳಸ-ಕೊಟ್ಟಗೆಹಾರ-ಸುಬ್ರಮಣ್ಯ ರಸ್ತೆಯನ್ನು ಕೂಡ ರಾಷ್ಟ್ರೀಯ ಹೆದ್ದಾರಿ ಮಾಡಬೇಕು. ಹೊರನಾಡು-ಕಳಸ-ಕೊಟ್ಟಿಗೆಹಾರ ರಸ್ತೆ ಕೂಡ ತೀರಾ ದುಸ್ಥಿತಿಯಲ್ಲಿ ಇದ್ದು ಇದನ್ನು ಮೇಲ್ದರ್ಜೆಗೆ ಏರಿಸುವುದೇ ಸೂಕ್ತ ಪರಿಹಾರ ಎಂದು ಪ್ರಸಾದ್ ಸಂಸದರ ಗಮನ ಸೆಳೆದರು.
ಹೊರನಾಡು-ಬಲಿಗೆ ರಸ್ತೆಗೆ ಹೊಂದಿಕೊಂಡಂತೆ ಇರುವ ತುರ, ಹೊನ್ನೆಕಾಡು, ಬಳಿಗೋಳು ಗ್ರಾಮಗಳಿಗೂ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದೂ ಪ್ರಸಾದ್ ಒತ್ತಾಯಿಸಿದರು. ಈ ಗ್ರಾಮಗಳಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು ಮಳೆಗಾಲದಲ್ಲಿ ರಸ್ತೆ ಸಂಪರ್ಕ ಕೊರತೆಯಿಂದ ತೀವ್ರ ಸಂಕಷ್ಟ ಪಡುತ್ತಾರೆ. ಪ್ರತಿದಿನವೂ ಕಳಸ, ಹೊರನಾಡು ಶಾಲೆಗೆ ಹೋಗುವ 30ಕ್ಕೂ ಹೆಚ್ಚು ಮಕ್ಕಳ ಪಡಿಪಾಟಲು ಹೇಳತೀರದಾಗಿದೆ. ಆದ್ದರಿಂದ ಈ ಮೂರು ಗ್ರಾಮಗಳ ರಸ್ತೆಗಳನ್ನು ಶಾಶ್ವತವಾಗಿ ಅಭಿವೃದ್ಧಿಪಡಿಸಬೇಕು ಎಂದೂ ಅವರು ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಒತ್ತಾಯಿಸಿದ್ದಾರೆ.
ಈ ಎಲ್ಲ ರಸ್ತೆಗಳ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಗಮನವನ್ನೂ ಸೆಳೆದಿದ್ದು ಅವರು ಕೂಡ ಸಂಬಂಧಪಟ್ಟವರಿಗೆ ಸೂಚನೆ ಕೊಡುವ ಭರವಸೆ ನೀಡಿದ್ದಾರೆ ಎಂದೂ ಪ್ರಸಾದ್ ಜೈನ್ ತಿಳಿಸಿದ್ದಾರೆ.
