ಕಳಸ:ಪಟ್ಟಣದಲ್ಲಿ ಗುರುವಾರ ನಡೆದ ಈದ್ ಮಿಲಾದ್ ಆಚರಣೆ ಸಂದರ್ಭದಲ್ಲಿ ಕಳಸದ ವಿಶೇಷತೆಯೇ ಆಗಿರುವ ಕೋಮು ಸಾಮರಸ್ಯ ಮತ್ತು ಪರಧರ್ಮ ಸಹಿಷ್ಣುತೆಯ ಸ್ಪಷ್ಟ ನಿದರ್ಶನ ಕಂಡು ಬಂತು.

ಜುಮ್ಮಾ ಮಸೀದಿಯಿಂದ ಹೊರಟಿದ್ದ ಮುಸ್ಲಿಂ ಬಾಂಧವರ ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂಚರಿಸಿತು.ಸುರಿಮಳೆಯ ನಡುವೆ ನಡೆದಿದ್ದ ಮೆರವಣಿಗೆಯಲ್ಲಿ ಮುಸ್ಲಿಮರು ನೆನೆದು ದಣಿದಿದ್ದರು. ದಫ್ ಕುಣಿತದ ಮಕ್ಕಳ ತಂಡ ಕೂಡ ಉತ್ಸಾಹದಿಂದ ಕುಣಿತ ನಡೆಸಿದ್ದರು.

ಆ ವೇಳೆಗೆ ಕೆಪಿಎಸ್ ಕಿರಿಯ ಪ್ರಾಥಮಿಕ ಶಾಲೆ ಎದುರು ಮುಸ್ಲಿಮೇತರ ಯುವಕರ ತಂಡ ಪಾನೀಯ ವಿತರಣೆ ಆರಂಭಿಸಿತ್ತು.ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ವಿಶೇಷ ಪಾನೀಯ ವಿತರಿಸಿದ ಯುವಕರ ತಂಡ ಮೆಚ್ಚುಗೆ ಗಳಿಸಿತು.
ಕಳಸ ಪಂಚಾಯಿತಿ ಸದಸ್ಯ ವೀರೇಂದ್ರ, ಸುಬ್ರಮಣ್ಯ, ಸಂತೋಷ್, ಅನಿಲ್, ಸತೀಶ್, ದಿನೇಶ್, ಮಹಾವೀರ ಮತ್ತಿತರ ಯುವಕರು ಈದ್ ಸಡಗರವನ್ನು ತಮ್ಮದೂ ಎಂಬAತೆ ಭಾವಿಸಿ ಪಾನೀಯ ಹಂಚಿದ್ದು ಮುಸ್ಲಿಮರಲ್ಲಿ ವಿಶೇಷ ಖುಷಿ ಮೂಡಿಸಿತ್ತು.
