ಕಳಸ:ಇಲ್ಲಿನ ಕೆಪಿಎಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಪಟ್ಟಣದ ಜೆಇಎಂ ಪ್ರೌಢಶಾಲೆ ಸಮಗ್ರ ಪ್ರಶಸ್ತಿ ಗಳಿಸಿದೆ.
ವೈಯಕ್ತಿಕ ಮತ್ತು ತಂಡ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಶಾಲೆಯ ಕ್ರೀಡಾಪಟುಗಳು ಒಟ್ಟು ೭೨ ಅಂಕ ಕಲೆ ಹಾಕಿ ಸಮಗ್ರ ಪ್ರಶಸ್ತಿ ಬಾಚಿಕೊಂಡರು.ಬಾಲಕರ ವಿಭಾಗದಲ್ಲಿ ಜೆಇಎಂ ಶಾಲೆಯ ಶ್ರೀನಿಧಿ ಮತ್ತು ಮೂಡಿಗೆರೆ ಸೈಂಟ್ ಮಾರ್ಥಾಸ್ ಶಾಲೆಯ ರುಮಾನ್ ರಾಜಾ ವೈಯಕ್ತಿಕ ಚಾಂಪಿಯನ್ಶಿಪ್ ಹಂಚಿಕೊAಡರು.
ಶ್ರೀನಿಧಿ ೧೫೦೦ ಮೀಟರ್ ಮತ್ತು ೩೦೦೦ ಓಟದಲ್ಲಿ ಅಗ್ರಸ್ಥಾನ ಗಳಿಸಿದರೆ ರುಮಾನ್ ರಾಜಾ ೧೦೦ ಮತ್ತು ೨೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದರು.
ಬಾಲಕಿಯರ ವಿಭಾಗದಲ್ಲಿ ಜೆಇಎಂ ಶಾಲೆಯ ಮಾನ್ವಿ ವಿ. ಶೆಟ್ಟಿ ವೈಯಕ್ತಿಕ ಚಾಂಪಿಯನ್ ಎನಿಸಿದರು.೪೦೦ ಮತ್ತು ೮೦೦ ಮೀಟರ್ ಓಟದ ಜೊತೆಗೆ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲೂ ಅವರು ಅಗ್ರಸ್ಥಾನ ಗಳಿಸಿದರು.
ಕ್ರೀಡಾಕೂಟವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಉದ್ಘಾಟಿಸಿದರು.ಸದಸ್ಯ ವೀರೇಂದ್ರ ಕ್ರೀಡಾಜ್ಯೋತಿ ಸ್ವೀಕರಿಸಿದರು.ಉಪಾಧ್ಯಕ್ಷ ರಂಗನಾಥ್, ಮುಖಂಡರಾದ ಪ್ರಭಾಕರ್, ನರೇಂದ್ರ ಇದ್ದರು.
ಸಮಾರೋಪ ಸಮಾರಂಭದಲ್ಲಿ ಕಳಸ ಎಜುಕೇಶನ್ ಸೊಸೈಟಿ ಅಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿ ಗೋಪಿನಾಥ್ ಪೈ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸ್ ಇದ್ದರು.
