ಕಳಸ: ತಾಲ್ಲೂಕಿನ ಕುದುರೆಮುಖದಲ್ಲಿ ಅರಣ್ಯ ಸಂಶೋಧನಾ ಕೇಂದ್ರ ಸ್ಥಾಪಿಸಲು ನಿಯೋಗವೊಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರಿಗೆ ಮನವಿ ಸಲ್ಲಿಸಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವು ಪಶ್ಚಿಮ ಘಟ್ಟದ 600 ಚದರ ಕಿ.ಮೀ ವಿಸ್ತೀರ್ಣದಲ್ಲಿ ಹರಡಿದ್ದು ಔಷಧೀಯ ಮತ್ತು ಸುವಾಸನೆಯ ಸಸ್ಯಗಳು, ಅಪರೂಪದ ಹೂಗಳು, ಶೋಲಾ ಕಾಡುಗಳು, ಹುಲ್ಲುಗಾವಲು ಮತ್ತು ಅನೇಕ ಹಳ್ಳ, ನದಿ ಒಳಗೊಂಡಿದೆ.ಇಲ್ಲಿ 897 ಸಸ್ಯ ಪ್ರಬೇಧಗಳು ಇದ್ದು ಅನೇಕ ಬಗೆಯ ವನ್ಯಮೃಗಗಳು ಕೂಡ ಇವೆ ಎಂದು ಭದ್ರಾ ಪರಿಸರ ಸಂರಕ್ಷಣಾ ಪ್ರತಿಷ್ಟಾನದ ಡಾ. ಶಿವಪ್ರಸಾದ್, ಚಂದ್ರಪ್ಪ, ವೆಂಕಟೇಶ್, ರವಿ ಕುಮಾರ್, ಸಿಪಿಐ ಮುಖಂಡ ರೇಣುಕಾರಾಧ್ಯ ಇದ್ದ ನಿಯೋಗ ಈ ಬಗ್ಗೆ ವಿವರವಾದ ಮನವಿ ಸಲ್ಲಿಸಿದೆ.
ದಕ್ಷಿಣ ಭಾರತದಲ್ಲೇ ಅತ್ಯಂತ ಹೆಚ್ಚು ಮಳೆ ಬೀಳುವ ಮತ್ತು ತೇವಭರಿತ ಪ್ರದೇಶ ಆಗಿರುವ ಕುದುರೆಮುಖದಲ್ಲಿ ಗಣಿಗಾರಿಕೆ ನಿಂತ ನಂತರವೂ ಪಟ್ಟಣದಲ್ಲಿ ಸಾಕಷ್ಟು ಮೂಲಸೌಕರ್ಯ ಸುಸಜ್ಜಿತವಾಗಿದೆ.ಇಲ್ಲಿ ಕಚೇರಿಗಳು, ವಸತಿಗೃಹಗಳು, ಆಟದ ಮೈದಾನ, ಆಸ್ಪತ್ರೆ, ಸಭಾಂಗಣ, ಹೆಲಿಪ್ಯಾಡ್ ಇದ್ದು ಅವುಗಳನ್ನು ಬಳಸಿಕೊಂಡು ಪರಿಸರ ಸಂಶೋಧನಾ ಕೇಂದ್ರ ಸ್ಥಾಪಿಸಲು ಅವಕಾಶ ಇದೆ ಎಂದು ಪತ್ರದಲ್ಲಿ ಗಮನ ಸೆಳೆಯಲಾಗಿದೆ.
ಇಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಿದಲ್ಲಿ ಮಾನವಕುಲಕ್ಕೆ ಪರಿಸರ ಅಧ್ಯಯನದ ಪ್ರಯೋಜನ ಸಿಗುತ್ತದೆ. 1988ರ ರಾಷ್ಟ್ರೀಯ ಅರಣ್ಯ ನೀತಿಯ ಅನುಸಾರವೂ ಕುದುರೆಮುಖದಲ್ಲಿ ಪರಿಸರ ಅಧ್ಯಯನಕ್ಕೆ ಅವಕಾಶ ಇದೆ.ಆದ್ದರಿಂದ ಇಲ್ಲಿ ಅರಣ್ಯ ಸಂಶೋಧನಾ ಸಂಸ್ಥೆ ಸ್ಥಾಪಿಸಲು ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗಿದೆ.
