ರವಿ ಕೆಳಂಗಡಿ
ಕಳಸ:ಬ್ರೆಜಿಲ್ನಲ್ಲಿ ಕಾಫಿ ಕೊಯ್ಲು ತಂದಿರುವ ಒತ್ತಡದಿಂದ ಜಾಗತಿಕ ಕಾಫಿ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದ್ದು ಧಾರಣೆ ದಿನೇ ದಿನೇ ಕುಸಿಯುತ್ತಿದೆ.
ಶುಕ್ರವಾರ ಲಂಡನ್ ಮಾರುಕಟ್ಟೆಯಲ್ಲಿ ರೊಬಸ್ಟಾ ಕಾಫಿ ಟನ್ ಒಂದಕ್ಕೆ 3170 ಡಾಲರ್ ಬೆಲೆ ಪಡೆದಿದ್ದು ಇದು ಕಳೆದ 14 ತಿಂಗಳಲ್ಲಿ ಕನಿಷ್ಟ ಬೆಲೆ ಆಗಿದೆ. ಅರೇಬಕಾ ಕಾಫಿ ಕೂಡ ಪೌಂಡ್ ಒಂದಕ್ಕೆ 286 ಸೆಂಟ್ಸ್ ಮಟ್ಟಕ್ಕೆ ಕುಸಿದಿದೆ.ಇದು ಕಳೆದ 8 ತಿಂಗಳಲ್ಲೇ ಕನಿಷ್ಟ ಬೆಲೆ. ಇದರಿಂದ ದೇಶಿ ಮಾರುಕಟ್ಟೆಯಲ್ಲಿ ಕಾಫಿ ಧಾರಣೆ ಶೇ.30ರಷ್ಟು ಬೆಲೆ ಕಳೆದುಕೊಂಡಿದೆ.
ಜಗತ್ತಿನಲ್ಲೇ ಅತ್ಯಧಿಕ ಕಾಫಿ ಬೆಳೆಯುವ ಬ್ರೆಜಿಲ್ ದೇಶದಲ್ಲಿ ಕಾಫಿ ಕೊಯ್ಲು ಚುರುಕಾಗಿ ನಡೆಯುತ್ತಿದೆ. ಅಲ್ಲಿ ಈಗ ಶೇಕಡಾ 70 ಕಾಫಿ ಕೊಯ್ಲು ಮುಗಿದಿದೆ.ಅಲ್ಲಿನ ಶೇ.90ರಷ್ಟು ರೊಬಸ್ಟಾ ಮತ್ತು ಶೇ.60ರಷ್ಟು ಅರೇಬಿಕಾ ಕೊಯ್ಲು ಮುಗಿದಿದೆ.
ವಿಯೆಟ್ನಾಂ ದೇಶದಲ್ಲಿ ಈ ಸಾಲಿನ ರೊಬಸ್ಟಾ ಬೆಳೆ ಪ್ರಮಾಣ ಹೆಚ್ಚಬಹುದು ಎಂಬ ನಿರೀಕ್ಷೆಯು ಲಂಡನ್ ಮಾರುಕಟ್ಟೆಯಲ್ಲಿ ರೊಬಸ್ಟಾ ಕಾಫಿಗೆ ತಲ್ಲಣ ತಂದಿದೆ.ಈ ಸಾಲಿನಲ್ಲಿ ಅಲ್ಲಿ ಶೇ.7ರಷ್ಟು ರೊಬಸ್ಟಾ ಫಸಲು ಹೆಚ್ಚಬಹುದು ಎಂಬ ನಿರೀಕ್ಷೆ ಇದೆ.
ಬ್ರೆಜಿಲ್ ದೇಶದಲ್ಲಿ ಅರೇಬಿಕಾ ಫಸಲು ಹೆಚ್ಚಲಾರದು ಎಂಬ ನಿರೀಕ್ಷೆಯ ಬೆನ್ನಲ್ಲೇ ಯುಎಸ್ಡಿಎ ಸಂಸ್ಥೆ ತನ್ನ 2025-26ನೇ ಸಾಲಿನ ಕಾಫಿ ಫಸಲಿನ ಅಂದಾಜನ್ನು ಪ್ರಕಟಿಸಿದೆ. ಅದರ ಪ್ರಕಾರ ಜಾಗತಿಕ ಕಾಫಿ ಉತ್ಪಾದನೆ ಮುಂದಿನ ಸಾಲಿಗೆ ಶೇ.2.5ರಷ್ಟು ಹೆಚ್ಚಿ 178 ದಶಲಕ್ಷ ಚೀಲ ತಲುಪಬಹುದು.ಈ ಪೈಕಿ ಅರೇಬಿಕಾ ಶೇ.1.7 ಕಡಿಮೆಯಾದರೆ ರೊಬಸ್ಟಾ ಶೇ.7ರಷ್ಟು ಹೆಚ್ಚಬಹುದು ಎಂಬ ನಿರೀಕ್ಷೆಯನ್ನು ಆ ಸಂಸ್ಥೆ ತಿಳಿಸಿದೆ.
ಕುಸಿಯುತ್ತಿರುವ ಕಾಫಿ ಬೆಲೆಯ ಬಗ್ಗೆ ಯುವ ಬೆಳೆಗಾರ ಮತ್ತು ಮಾರುಕಟ್ಟೆ ವಿಶ್ಲೇಷಕ ಗೌತಹಳ್ಳಿ ಕರಣ್, ಜಾಗತಿಕ ಅರೇಬಿಕಾ ಫಸಲಿನ ಆಧಾರದ ಮೇಲೆ ರೊಬಸ್ಟಾ ಬೆಲೆ ಏರುಪೇರು ಆಗಬಹುದು. ಅರೇಬಿಕಾ ಫಸಲು ನಿರೀಕ್ಷೆಗಿಂತ ಕಡಿಮೆಯಾದರೆ ಮುಂದಿನ ದಿನಗಳಲ್ಲಿ ರೊಬಸ್ಟಾ ಧಾರಣೆ ಹೆಚ್ಚಬಹುದು ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಇದಕ್ಕೆ ಪೂರಕ ಎಂಬಂತೆ ಕಾಫಿ ಉದ್ಯಮದ ಜಾಗತಿಕ ಸಂಸ್ಥೆಯಾದ ವೋಲ್ಕೆಫೇ ಕೂಡ 2025-26ನೇ ಸಾಲಿನಲ್ಲಿ ಅರೇಬಿಕಾ ಕಾಫಿ 9 ದಶಲಕ್ಷ ಚೀಲದಷ್ಟು ಕಡಿಮೆ ಆಗಬಹುದು ಎಂದು ಅಂದಾಜಿಸಿದೆ.
ಇತ್ತ ಬಹುತೇಕ ಬೆಳೆಗಾರರು ಗರಿಷ್ಟ ಧಾರಣೆ ನಿರೀಕ್ಷೆಯಿಂದ ಕಾಫಿ ದಾಸ್ತಾನು ಮಾಡಿದ್ದರು.ಇದೀಗ ಶೇ.30ರಷ್ಟು ಬೆಲೆ ಕುಸಿದಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ. ಮಳೆಯಿಂದಾಗಿ ಈ ಬಾರಿ ಫಸಲು ಕೂಡ ನೆಲಕಚ್ಚುತ್ತಿದೆ.ಇದು ಕೂಡ ಧಾರಣೆ ಕುಸಿತದ ಜೊತೆಗೆ ಬೆಳೆಗಾರರಿಗೆ ತಲೆ ನೋವು ಆಗಿದೆ.
