ರವಿ ಕೆಳಂಗಡಿ
ಕಳಸ:ಇಲ್ಲಿನ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಳುವಳ್ಳಿ ಸಮೀಪದ ತಾರಿಕೊಂಡದ ರಮೇಶ ಅವರ ಕುಟುಂಬಕ್ಕೆ ಒಂದರ ಮೇಲೊಂದು ಆಘಾತ ಬಂದೆರಗುತ್ತಲೇ ಇದೆ.
ಕಳೆದ ಮೇ ತಿಂಗಳಲ್ಲಿ ಅವರ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಳು.ಇದೀಗ ಅವರ ಮನೆ ಅತಿವೃಷ್ಟಿ ಹೊಡೆತಕ್ಕೆ ಸಿಕ್ಕಿ ನೆಲಸಮ ಆಗಿದೆ. ದುರ್ಗಮ ಪ್ರದೇಶವಾದ ತಾರಿಕೊಂಡದಲ್ಲಿ ಮಣ್ಣಿನ ಗೋಡೆಯ ಬಿಡಾರ ಕಟ್ಟಿಕೊಂಡು ಸಂಸಾರ ಮಾಡುತ್ತಿದ್ದ ರಮೇಶ ದಂಪತಿ ತೋಟ ಕಾರ್ಮಿಕರು. ದೈಹಿಕ ಶ್ರಮವನ್ನೇ ನಂಬಿ 4 ಹೆಣ್ಣು ಮಕ್ಕಳಿಗೂ ಶಿಕ್ಷಣ ಕೊಡಿಸುವ ಪಣ ತೊಟ್ಟಿದ್ದವರು.

ಮೊದಲ ಮಗಳು ಕೂಡ ಪದವಿವರೆಗೆ ಓದಿ ವಿವಾಹವಾಗಿದ್ದಾರೆ. ಎರಡನೇ ಮಗಳು ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿ. ಮೂರನೇ ಮಗಳು ಪದವಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು.ಕೊನೆಯ ಮಗಳು ಕಳಸ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ.
ಕಳಸದಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಈ ಕುಟುಂಬದ ಬಂಧುಗಳ ಮದುವೆ ಇತ್ತು. ಅದರಲ್ಲಿ ಭಾಗವಹಿಸಲು ಮನೆಯಲ್ಲಿ ಇದ್ದ ಒಂದೇ ಜೊತೆ ಹೊಸ ಬಟ್ಟೆ ಧರಿಸುವ ಬಗ್ಗೆ ಸಹೋದರಿಯರ ಮಧ್ಯೆ ವೈಮನಸ್ಸು ಮೂಡಿತ್ತು.
ಇಂತಹ ಬಡತನದ ಕುಟುಂಬಕ್ಕೆ ಶನಿವಾರ ಮತ್ತೊಂದು ಆಘಾತ.

ಅವರ ಮನೆಯ ಗೋಡೆಗಳು ನೀರು ಕುಡಿದು ನೆಲಸಮವಾಗಿಯೇ ಬಿಟ್ಟಿತು.ಮನೆಯಲ್ಲಿದ್ದ ಅಷ್ಟಿಷ್ಟು ವಸ್ತುಗಳನ್ನು ಬಾಚಿಕೊಂಡು ಈ ಕುಟುಂಬವೀಗ ಕಳಸದ ಶಿವನಗರದ ಬಂಧುಗಳ ಮನೆಗೆ ಹೊರಟಿದೆ.

ರಮೇಶ ಅವರ ಮನೆ ನೆಲಸಮವಾದ ಪ್ರದೇಶಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ವೀರೇಂದ್ರ, ಗ್ರಾಮ ಲೆಕ್ಕಾಧಿಕಾರಿ ಪ್ರಸನ್ನ ಭೇಟಿ ನೀಡಿದ್ದರು.ಈ ಕುಟುಂಬಕ್ಕೆ ಮನೆ ಮಂಜೂರಾದರೂ ಅವರು ಇರುವ ಪ್ರದೇಶದಲ್ಲಿ ಮನೆ ನಿರ್ಮಾಣ ಅಸಾಧ್ಯ.ಅಲ್ಲಿ ರಸ್ತೆಯೇ ಇಲ್ಲದಿರುವುದರಿಂದ ಈ ಕುಟುಂಬಕ್ಕೆ ಕಳಸದ ಸಮೀಪದ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳಲು ನೆರವು ನೀಡುವ ಉದ್ದೇಶವಿದೆ ಎಂದು ವೀರೇಂದ್ರ ಹೇಳುತ್ತಾರೆ.
