ಕಳಸ:ಕಳಸೇಶ್ವರ ಸ್ವಾಮಿಯ ಇನಾಂ ಭೂಮಿ ವಿವಾದ ಪರಿಹರಿಸಲು ಅರಣ್ಯ ಇಲಾಖೆಗೆ ಕಂದಾಯ ಇಲಾಖೆಯು ಬದಲಿ ಭೂಮಿ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿಧಾನ ಪರಿಷತ್ನಲ್ಲಿ ಬುಧವಾರ ಒತ್ತಾಯಿಸಿದರು.
ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು ಕಳಸೇಶ್ವರ ದೇವಸ್ಥಾನಕ್ಕೆ ೬೭೭೭ ಎಕರೆ ಭೂಮಿಯನ್ನು ಕಾರ್ಕಳದ ಭೈರವ ಅರಸರು ೧೫೧೨ರಲ್ಲಿ ದಾನ ನೀಡಿದ್ದರು. ಆದರೆ ಇದನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿ ಮೈಸೂರು ಮಹಾರಾಜರು ೧೯೨೮ರಲ್ಲಿ ಗೆಜೆಟ್ ಹೊರಡಿಸಿದ್ಧಾರೆ.
ಇದರ ಬಗ್ಗೆ ಮಾಹಿತಿ ಇಲ್ಲದೆ ೩೩೦ ಕುಟುಂಬಗಳಿಗೆ ೭೫೦ ಎಕರೆ ಮಂಜೂರು ಮಾಡಲಾಗಿದೆ.ಜೊತೆಗೆ ೬೫೦ ಕುಟುಂಬಗಳು ೧೯೦೦ ಎಕರೆ ಒತ್ತುವರಿ ಮಾಡಿಕೊಂಡು ಜೀವನ ಸಾಗಿಸುತ್ತಿವೆ.ಇವರ ಹಿತೃಷ್ಟಿಯಿಂದ ರಾಜ್ಯ ಸಕಾರವು ಅರಣ್ಯ ಇಲಾಖೆಗೆ ಬೇರೆ ಕಡೆ ಕಂದಾಯ ಭೂಮಿ ವರ್ಗಾಯಿಸಬೇಕು ಎಂದು ಸಿ.ಟಿ.ರವಿ ಒತ್ತಾಯಿಸಿದರು.
ಈ ಬಗ್ಗೆ ಸರ್ವೋಚ್ಛ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು. ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಲು ತಕ್ಷಣ ಕ್ರಮ ವಹಿಸುವುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭರವಸೆ ನಿಡಿದರು.
ಭೀಮೇಶ್ವರ ಜೋಷಿ ಹರ್ಷ: ಇನಾಂ ಭೂಮಿ ಹೋರಾಟ ಸಮಿತಿ ಅಧ್ಯಕ್ಷರಾದ ಭೀಮೇಶ್ವರ ಜೋಷಿ ಈ ಬಗ್ಗೆ ಹೇಳಿಕೆ ನೀಡಿದ್ದು, ಸಿ.ಟಿ.ರವಿ ಹೊರನಾಡಿಗೆ ಬಂದಿದ್ದಾಗ ಇನಾಂ ಭೂಮಿ ಸಮಸ್ಯೆ ಬಗ್ಗೆ ಅವರ ಗಮನ ಸೆಳೆಯಲಾಗಿತ್ತು.ಸದನದಲ್ಲಿ ಈ ಬಗ್ಗೆ ಸಿ.ಟಿ.ರವಿ ಸರ್ಕಾರದ ಗಮನ ಸೆಳೆದಿದಾರೆ.
ಸಿ.ಟಿ.ರವಿ ಅವರಿಗೆ ಮತ್ತು ಕೂಡಲೇ ಸ್ಪಂದಿಸಿದ ಕಂದಾಯ ಸಚಿವರಿಗೆ, ಶಾಸಕಿ ನಯನಾ ಮೋಟಮ್ಮ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಭೋಜೇಗೌಡ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಂಸದೆ ಶೋಭಾ ಕರಂಧ್ಲಾಜೆ, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ, ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್ ಅವರೆಲ್ಲರಿಗೂ ಹೋರಾಟ ಸಮಿತಿ ಪರವಾಗಿ ಭೀಮೇಶ್ವರ ಜೋಷಿ ಧನ್ಯವಾದ ಸಮರ್ಪಿಸಿದ್ದಾರೆ.
