ಕಳಸ:ಸತತ ೧೫ ದಿನಗಳ ಮಳೆಯಿಂದ ರೋಗ ಪೀಡಿತವಾಗಿರುವ ಕಾಫಿ ತೋಟಗಳಿಗೆ ಕಾಫಿ ಮಂಡಳಿಯ ರೋಗಶಾಸ್ತ್ರಜ್ಞೆ ಎ.ಪಿ. ರಂಜಿನಿ ಇಂದು ಭೇಟಿ ನೀಡಿದರು.

ಕಳಸ ತಾಲ್ಲೂಕಿನಲ್ಲಿ ಬಿಡುವು ಇಲ್ಲದಂತೆ ಅತಿಯಾದ ಮಳೆ ಸುರಿಯುತ್ತಿದ್ದು ಕಾಫಿಗೆ ಕೊಳೆ ರೋಗ ಮತ್ತು ಹಸಿರು ಕಾಯಿ ಉದುರುವ ರೋಗ ತಗುಲಿದೆ ಎಂಬ ಕಾರಣಕ್ಕೆ ಅವರು ವಿವಿಧ ತೋಟಗಳಿಗೆ ಭೇಟಿ ನೀಡಿದರು.ಆಯಾ ತೋಟದಲ್ಲಿ ಆಗಿರುವ ಹಾನಿ ಪರಿಶೀಲಿಸಿದರು.ಸ್ಥಳೀಯ ಬೆಳೆಗಾರರಿಗೆ ಅಗತ್ಯ ಸಲಹೆ ನೀಡಿದರು.
ಕೊಳೆ ರೋಗದಿಂದ ಬಳಲುತ್ತಿರುವ ತೋಟಗಳಲ್ಲಿ ಕೊಳೆ ಕಾಯಿ ಮತ್ತು ಕೊಳೆಪೀಡಿತ ಎಲೆ ಮತ್ತು ರೆಕ್ಕೆಗಳನ್ನು ಸಂಗ್ರಹಿಸಿ ನಾಶಪಡಿಸುವಂತೆ ಅವರು ಸಲಹೆ ನೀಡಿದರು. ವೆಟ್ ಫೀಟ್ ರೋಗದ ನಿರ್ವಹಣೆಗೆ ತೋಟದಲ್ಲಿ ನೀರು ನಿಲ್ಲದಂತೆ ಚರಂಡಿ ನಿರ್ವಹಣೆ ಮಾಡಬೇಕು ಎಂದೂ ತಿಳಿಸಿದರು.

ಮಳೆ ಬಿಡುವು ನೀಡಿದಾಗ ಟೆಬುಕೊನಾಜೋಲ್ ಔಷಧಿಯನ್ನು ಪ್ಲಾನೋಫಿಕ್ಸ್ ಜೊತೆಗೆ ಬರೆಸಿ ಕಾಫಿ ಗಿಡಗಳಿಗೆ ಸಿಂಪಡಣೆ ಮಾಡುವಂತೆ ಅವರು ತಿಳಿಸಿದರು. ಜೊತೆಗೆ ತೋಟಕ್ಕೆ ಯೂರಿಯಾ ಅಥವಾ ಅಮೋನಿಯಮ್ ಸಲ್ಫೇಟ್ ಗೊಬ್ಬರ ಬಳಸಿ ಕಾಫಿ ಉದುರುವಿಕೆ ತಡೆಯಬಹುದು ಎಂದೂ ಅವರು ತಿಳಿಸಿದರು.
ಕಾಫಿ ಗಿಡಗಳ ನೆತ್ತಿ ಬಿಡಿಸಿ ಗಾಳಿ ಆಡಲು ಅವಕಾಶ ಕೊಡಬೇಕು. ಗಿಡಗಳ ಕೆಳಗಿನ ಕಳೆ ನಿರ್ವಹಣೆ ಮಾಡಿ ೪ ಗಿಡಗಳ ಮಧ್ಯೆ ರಾಶಿ ಮಾಡಬೇಕು.ಬೇರುಗಳಿಗೆ ಉಸಿರಾಡಲು ಅವಕಾಶ ಮಾಡಬೇಕು ಎಂದೂ ವಿಜ್ಞಾನಿ ರಂಜಿನಿ ಸಲಹೆ ನೀಡಿದರು.
ಕೊಳೆ ರೋಗದ ಶಿಲೀಂಧ್ರವು ತೋಟದಲ್ಲಿ ಅನೇಕ ವರ್ಷಗಳ ಕಾಲ ಉಳಿದಿರುತ್ತದೆ.ಆದ್ದರಿಂದ ಪ್ರತಿ ವರ್ಷವೂ ಮೇ ತಿಂಗಳ ಮಧ್ಯಭಾಗದಲ್ಲಿ ಮೊದಲ ಸುತ್ತಿನ ಬೋರ್ಡೊ ಸಿಂಪಡಣೆ ಮೂಲಕ ಶಿಲೀಂಧ್ರದ ಬೆಳವಣಿಗೆ ಮತ್ತು ಹರಡುವಿಕೆ ತಡೆಯಬಹುದು ಎಂದೂ ಅವರು ತಿಳಿಸಿದರು.
ಕಳಸ ಶಾಖೆಯ ಕಿರಿಯ ಸಂಪರ್ಕಾಧಿಕಾರಿ ಸುರೇಂದ್ರ ಕೂಡ ವಿಜ್ಞಾನಿ ಜೊತೆಗೆ ತೋಟಗಳಿಗೆ ಭೇಟಿ ನೀಡಿದರು.
