ಕಳಸ:3 ದಶಕಗಳ ಹಿಂದಿನ ಮಾತು. ಹೊರನಾಡು ಗ್ರಾಮದಲ್ಲಿ ವಿದ್ಯಾವಂತರ ಸಂಖ್ಯೆಯೇ ಕಡಿಮೆ ಇದ್ದ ಕಾಲದಲ್ಲಿ ಚಿಕ್ಕನಕೊಡಿಗೆ ಚಂದ್ರರಾಜಯ್ಯ ಅವರ ಹೆಸರು ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದ್ದ ಕಾಲ ಅದು.
ಹೊರನಾಡಿನಿಂದ 4 ಕಿ.ಮೀ ದೂರದ ಚಿಕ್ಕನಕೊಡಿಗೆಗೆ ರಸ್ತೆ ಸಂಪರ್ಕವೇ ಇಲ್ಲದ ಕಾಲ ಅದು. ಬೆಳಿಗ್ಗೆ ಮನೆಯಿಂದ ಹೊರಟರೆ ಕಾಲ್ನಡಿಗೆ ಮೂಲಕ ಹೊರನಾಡು, ಕಳಸಕ್ಕೆ ತಲುಪಿ ರಾಜಕೀಯ ಚಟುವಟಿಕೆಯಲ್ಲಿ ತೊಡಗುತ್ತಿದ್ದ ಚಂದ್ರರಾಜಯ್ಯ ಅವರದ್ದು ಸಾಹಸಭರಿತ ರಾಜಕೀಯ ಜೀವನ.
ದುರ್ಗಮ ಪ್ರದೇಶದ ಕೃಷಿ ಕುಟುಂಬದಿಂದ ಬಂದರೂ ತಮ್ಮ ಛಲಬಿಡದ ಸ್ವಭಾವ ಮತ್ತು ವಾಕ್ ಚಾತುರ್ಯದ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಗಳಿಸಿದ್ದರು. ಕಳಸ ಹೊರನಾಡು ಒಂದೇ ಪಂಚಾಯಿತಿ ಆಗಿದ್ದ ಕಾಲದಲ್ಲಿ ಪಂಚಾಯಿತಿ ಉಪಾಧ್ಯಕ್ಷರಾಗಿದ್ದರು. ಆನಂತರ ಹೊರನಾಡು ಸ್ವತಂತ್ರ ಪಂಚಾಯಿತಿ ಆದಾಗ ಅಧ್ಯಕ್ಷರೂ ಆದವರು ಚಂದ್ರರಾಜಯ್ಯ.
ಹೊರನಾಡು-ಬಲಿಗೆ ಅಭಿವೃದ್ಧಿ ಸಮಿತಿಯಲ್ಲಿ ಹಗಲಿರುಳೂ ಶ್ರಮಿಸಿ ಹೊರನಾಡು-ಬಲಿಗೆ ರಸ್ತೆ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಚಂದ್ರರಾಜಯ್ಯ. ರಾಜಕೀಯದ ಜೊತೆಗೆ ಕೃಷಿಯಲ್ಲೂ ಕೂಡ ಅವರದು ಎತ್ತಿದ ಕೈ. ಧಾರ್ಮಿಕ ಕೇತ್ರದಲ್ಲೂ ಕೂಡ ಮುಂಚೂಣಿಯಲ್ಲಿದ್ದ ಅವರು ಕಳಸ ತಾಲ್ಲೂಕಿನ ಜೈನ ಧರ್ಮೀಯರ ಪೈಕಿ ಅಗ್ರಗಣ್ಯ ನಾಯಕರಾಗಿದ್ದರು.

1992-94ರ ಅವಧಿಯಲ್ಲಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಆಯ್ಕೆ ಆಗಿ ಕೇಂದ್ರ ಸಚಿವೆ ಆಗಿದ್ದ ಡಿ.ಕೆ.ತಾರಾದೇವಿ ಅವರು ಚಂದ್ರರಾಜಯ್ಯ ಅವರ ಸಂಘಟನಾ ಚಾತುರ್ಯ ಮತ್ತು ಮಾತುಗಾರಿಕೆಗೆ ಬೆರಗಾಗಿದ್ದರು. ಆಗಿನಿಂದ ಚಂದ್ರರಾಜಯ್ಯ ತಾರಾದೇವಿ ಅವರ ನಿಕಟವರ್ತಿ ಆಗಿದ್ದರು.ತಮ್ಮೂರಿನ ಸಮಸ್ಯೆ ಅಥವಾ ಕೆಲಸಕ್ಕೆ ನೇರವಾಗಿ ದಿಲ್ಲಿಗೆ ಕರೆಮಾಡುವಷ್ಟು ಸಂಪರ್ಕವನ್ನು ಚಂದ್ರರಾಜಯ್ಯ ಹೊಂದಿದ್ದರು.
ತಾರಾದೇವಿ, ಚಂದ್ರರಾಜಯ್ಯ ಅವರನ್ನು ಕುದುರೆಮುಖ ಅಧಿಸೂಚಿತ ಪ್ರದೇಶದ ನಿರ್ದೇಶಕರಾಗಿ ಆರಿಸಿದ್ದರು. ಈ ಅವಧಿಯಲ್ಲಿ ಕಳಸಕ್ಕೆ ಕುಡಿಯುವ ನೀರಿನ ಘಟಕ, ಕಳಸ ಕ್ರೀಡಾಂಗಣ ಮತ್ತು ಕೆಲ ರಸ್ತೆಗಳ ಅಭಿವೃದ್ಧಿ ನಡೆದಿತ್ತು.
ಬಡವ, ಬಲ್ಲಿದ ಎನ್ನದೆ ಎಲ್ಲರೊಂದಿಗೆ ಸಮಭಾವದಿಂದ ಬೆರೆಯುತ್ತಿದ್ದ ಚಂದ್ರರಾಜಯ್ಯ ತಮ್ಮ ಸಮಕಾಲೀನರ ಮೇಲೆ ಬಹಳ ಪ್ರಭಾವ ಬೀರುತ್ತಿದ್ದರು.ಚಂದ್ರರಾಜಯ್ಯ ಅವರ ನಿಧನದ ಮೂಲಕ ಹೊರನಾಡು ಬಹುದೊಡ್ಡ ನಷ್ಟ ಅನುಭವಿಸಿದೆ.ನಿಜಕ್ಕೂ ಇಂತಹ ಮುತ್ಸದ್ದಿಯ ಸಾವು ಎಂದರೆ ಅದು ತುಂಬಲಾರದ ನಷ್ಟವೇ ಸರಿ.
