ಕಳಸ:15 ವರ್ಷದ ಹಿಂದ ಕಳಸ ತಾಲ್ಲೂಕಿನಲ್ಲಿ ಹಲವಾರು ತೂಗುಸೇತುವೆಗಳು ನಿರ್ಮಾಣ ಆದಾಗ ಆ ಗ್ರಾಮಗಳ ನಿವಾಸಿಗಳು ಸಂಪರ್ಕ ಸೇತುವೆ ಸಿಕ್ಕಿದ ಹೆಮ್ಮೆ ಅನುಭವಿಸಿದ್ದರು. ಆದರೆ ಈಗ ಆ ಸೇತುವೆಗಳು ನಿರ್ವಹಣೆ ಇಲ್ಲದೆ ಸೊರಗುತ್ತಿರುವಾಗ ಗ್ರಾಮಸ್ಥರು ಸೇತುವೆಯ ಭಾಗ್ಯ ಅಲ್ಪ ಕಾಲದಲ್ಲೇ ಮುಗಿದು ಹೋದೀತೇ ಎಂಬ ಭಯದಲ್ಲಿ ಇದ್ದಾರೆ. ಅತ್ತ ಶಾಶ್ವತ ಸೇತುವೆಗಳ ಕನಸೂ ಕಾಣಲಾರದೆ ಹಳ್ಳಿಗರು ಭ್ರಮಾನಿರಸನಕ್ಕೂ ಒಳಗಾಗುತ್ತಿದ್ದಾರೆ.
ಕಳಸ ತಾಲ್ಲೂಕು ವ್ಯಾಪ್ತಿಯ ಸಂಸೆ ಮತ್ತು ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ತೂಗುಸೇತುವೆಗಳು ಇವೆ. ತಮಾಷೆ ಸಂಗತಿ ಎಂದರೆ ಈ ತೂಗುಸೇತುವೆಗಳ ನಿರ್ವಹಣೆ ಮಾಡುವವರು ಯಾರು, ಯಾರಿಗೆ ಮನವಿ ಕೊಡಬೇಕು ಎಂಬುದೇ ಈವರೆಗೂ ಜನರಿಗೆ ತಿಳಿದಿಲ್ಲ.
ಕಳಸ ಸಮೀಪದ ವಶಿಷ್ಟಾಶ್ರಮ, ಕಲ್ಲುಗೋಡು, ಸಂಸೆ ಗ್ರಾಮದ ಆನಮಗೆ, ಸಂಸೆ ಮತ್ತಿತರ ಪ್ರದೇಶದಲ್ಲಿ 15 ವರ್ಷದ ಹಿಂದೆಯೇ ಈ ತೂಗುಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ.ಇವು ಕಾಲದ ಓಟಕ್ಕೆ ಸಿಲುಕಿ ಶಿಥಿಲಗೊಳ್ಳುತ್ತಿವೆ. ವಿಪರ್ಯಾಸ ಎಂದರೆ ಈ ತೂಗುಸೇತುವೆಗಳ ನಿರ್ವಹಣೆಯ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ ಎಂಬುದು ಗ್ರಾಮಸ್ಥರ ಆಕ್ರೋಶ.
ಈ ತೂಗುಸೇತುವೆಗಳು ಆಯಾ ಪ್ರದೇಶದ ನೂರಾರು ಮನೆಗಳ ಜನರಿಗೆ ಮಳೆಗಾಲದಲ್ಲಿ ಸಂಪರ್ಕ ಕಲ್ಪಿಸುವ ಹೆಚ್ಚುಗಾರಿಕೆ ಹೊಂದಿವೆ. ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವಧಿಯಲ್ಲಿ ನಿರ್ಮಾಣವಾಗಿದ್ದ ಈ ಸೇತುವೆಗಳು ಆ ಕಾಲದ ಎಂಜಿನಿಯರಿಂಗ್ ಅಚ್ಚರಿಯಂತೇ ಇತ್ತು.

ಆದರೆ ಕಾಲ ಕಳೆದಂತೆ ಈ ತೂಗುಸೇತುವೆಗಳ ಕಬ್ಬಿಣದ ಪಟ್ಟಿಗಳು, ಜಾಲರಿಗಳು ತುಕ್ಕು ಹಿಡಿದಿವೆ. ಮೆಟ್ಟಿಲುಗಳ ಕೆಳಗಿನ ಕಬ್ಬಿಣದ ಆಧಾರ ಕೂಡ ಜಖಂ ಆಗಿದೆ. ಕಳೆದ ಹಲವಾರು ವರ್ಷಗಳಿಂದ ಈ ತೂಗುಸೇತುವೆಗಳಿಗೆ ಬಣ್ಣ ಬಳಿಯಿರಿ ಎಂದು ಸ್ಥಳೀಯರು ಕೂಗಿ ಕರೆದರೂ ಯಾರ ಕಿವಿಗೂ ಬಿದ್ದಿಲ್ಲ.
ಪರಿಣಾಮವಾಗಿ ಸೇತುವೆಯ ಮೇಲೆ ಈಗ ಜನರು ಓಡಾಡಿದಾಗ ಕೀರಲು ಧ್ವನಿ ಕೇಳಿ ಬರುತ್ತಿದೆ.ಸೇತುವೆಗಳು ಅತ್ತಿತ್ತ ತೂಗುವಾಗ ಗ್ರಾಮಸ್ಥರು ಭಯ ಬೀಳುತ್ತಾರೆ.ಕೆಳಗೆ ತುಂಬಿ ಹರಿಯುವ ಭದ್ರಾ ನದಿ ಕೂಡ ಭಯವನ್ನು ಇನ್ನಷ್ಟು ಹೆಚ್ಚಿಸುತ್ತಾಳೆ.
‘ನಾವು ಮಳೆಗಾಲದಲ್ಲಿ ತೂಗುಸೇತುವೆ ಮೇಲೆ ಹೋಗುವುದನ್ನೇ ಬಿಟ್ಟಿದ್ದೀವಿ.ಇದು ಯಾವಾಗ ಮುರಿದುಕೊಳ್ಳುತ್ತೋ ಎಂಬ ಭಯ ಇದೆ. ಶಾಲಾ ಮಕ್ಕಳು ಸೇತುವೆ ಮೇಲೆ ಹೋಗುವಾಗ ಹೆದರಿಕೆ ಆಗುತ್ತೆ ಅನ್ನುತ್ತಾರೆ’ ಎಂದು ಕಲ್ಲುಗೋಡಿನ ಸುರೇಶ್, ರವಿ, ವಸಂತ್, ಗುರು ಮತ್ತಿತರರು ತಮ್ಮ ಗ್ರಾಮದ ತೂಗುಸೇತುವೆ ಶಿಥಿಲವಾಗಿರುವ ಬಗ್ಗೆ ಕಾಳಜಿ ತೋರಿಸುತ್ತಾರೆ.
ಈ ತೂಗುಸೇತುವೆಗಳ ನಿರ್ವಹಣೆ ಯಾರ ಹೊಣೆಗಾರಿಕೆ ಎಂದು ಕಳಸ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಂಗನಾಥ್ ಅವರು ಕೇಳಿದಾಗ, ಈ ಸೇತುವೆಗಳಿಗೆ ವಾರಸುದಾರರು ಎಂಬುದೇ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಸಾಮಾನ್ಯವಾಗಿ ಸೇತುವೆಗಳು, ರಸ್ತೆಗಳು ಲೋಕೋಪಯೋಗಿ ಅಥವಾ ಜಿಲ್ಲಾ ಪಂಚಾಯಿತಿ ಎಂಜಿನಿಯಿರಿಂಗ್ ವಿಭಾಗದ ನಿರ್ವಹಣೆಗೆ ಒಳಪಟ್ಟಿರುತ್ತವೆ. ಆದರೆ ಈ ತೂಗುಸೇತುವೆಗಳು ಯಾವ ಇಲಾಖೆಗೆ ಒಳಪಟ್ಟಿವೆ ಎಂಬುದೇ ಯಕ್ಷಪ್ರಶ್ನೆ. ಇವು ಆಯಾ ಗ್ರಾಮ ಪಂಚಾಯಿತಿಗಳಿಗೆ ಕೂಡ ಹಸ್ತಾಂತರ ಆಗಿಲ್ಲ ಎಂದು ಅವರು ಹೇಳುತ್ತಾರೆ.

200ರಿಂದ 30 ಅಡಿ ಉದ್ದದ ಈ ತೂಗುಸೇತುವೆಗಳಿಗೆ ಬಣ್ಣ ಬಳಿಯಲು ಲಕ್ಷಾಂತರ ರೂಪಾಯಿ ಬೇಕಾಗುತ್ತದೆ.ಜೊತೆಗೆ ಅತ್ಯಂತ ನಿಪುಣರು ಈ ಕೆಲಸ ಮಾಡಬೇಕಾಗುತ್ತದೆ.ಸೇತುವೆಯ ನಟ್ ಬೋಲ್ಟ್, ಕಬ್ಬಿಣದ ರೋಪ್ ಬಿಚ್ಚಿ ಬಣ್ಣ ಬಳಿಯುವವರು ಯಾರು. ಇಂತಹ ಕೆಲಸವನ್ನು ಗ್ರಾಮ ಪಂಚಾಯಿತಿಗಳು ನಿರ್ವಹಿಸುವುದು ಸುಲಭ ಅಲ್ಲ ಎಂದೂ ರಂಗನಾಥ್ ಅಭಿಪ್ರಾಯಪಡುತ್ತಾರೆ.
ಬಹುತೇಕ ಸಣ್ಣ ಕೃಷಿಕರು, ಕೂಲಿ ಕಾರ್ಮಿಕರೇ ಇರುವ ಪ್ರದೇಶಕ್ಕೆ ಈ ತೂಗುಸೇತುವೆಗಳು ಸಂಪರ್ಕ ಒದಗಿಸುತ್ತಿವೆ.ಪ್ರವಾಸಿಗರು ಕೂಡ ತೂಗುಸೇತುವೆಗಳನ್ನು ಬಳಸಿ ರೋಮಾಂಚಕ ಅನುಭವ ಪಡೆಯಲು ವಾರಾಂತ್ಯದಲ್ಲಿ ಇಲ್ಲಿಗೆ ದಾಂಗುಡಿ ಇಡುತ್ತಾರೆ.ಇಂತಹ ಸಂದರ್ಭದಲ್ಲಿ ಈ ತೂಗುಸೇತುವೆಗಳು ಕಳಚಿ ಬಿದ್ದರೆ ಆಗುವ ಅಪಾಯಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗೆ ಉತ್ತರಿಸುವವರೇ ಇಲ್ಲವಾಗಿದೆ.
ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಒಬ್ಬರು ಕಳೆದ ವಾರ ತಾಲ್ಲೂಕಿನ ಎಲ್ಲ ತೂಗುಸೇತುವೆಗಳ ಅಳತೆ ತೆಗೆದುಕೊಂಡು ಹೋಗಿದ್ದಾರೆ. ಇವುಗಳ ನಿರ್ವಹಣೆಗೆ ಅನುಮೋದನೆ ಸಿಗಬಹುದು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
