ರವಿ ಕೆಳಂಗಡಿ
ಕಳಸ:ಕಳೆದ ಮಳೆಗಾಲದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದಕ್ಕೆ ಮಂಕಾಗಿದ್ದ ಭದ್ರಾ ನದಿಗೆ ಈ ಮಳೆಗಾಲದಲ್ಲಿ ಬಿಡುವೇ ಇಲ್ಲದಷ್ಟು ಕೆಲಸ. ನದಿಯ ಒಡಲಿನ ಕಲ್ಲುಗಳೆಲ್ಲ ಸವೆದು ಹೋಗುವಷ್ಟು ವೇಗದ ಹರಿವಿನ ಹೊಣೆಗಾರಿಕೆ. ನದಿ ದಂಡೆಯಲ್ಲಿ ಸ್ವಾರ್ಥಿ ಜನರು ತಂದು ಗುಪ್ಪೆ ಮಾಡಿರುವ ಮಲಿನವನ್ನು ತೊಳೆಯುವ ಧಾವಂತ.
ಈ ವರ್ಷ ಜೂನ್ ತಿಂಗಳಿಂದಲೂ ಭದ್ರೆಯ ಒಡಲು ಭರ್ತಿ ಆಗುತ್ತಲೇ ಇದೆ. ಮೇಘರಾಜನ ಕೃಪೆಯಿಂದ ಭದ್ರೆಯ ರೂಪಕ್ಕೆ ಗಂಭೀರತೆ, ಪುಷ್ಟಿ ಬಂದಿದೆ. ಜುಲೈ ತಿಂಗಳಲ್ಲಿ ಪ್ರತಿ ದಿನವೂ ಬೀಳುತ್ತಿರುವ ಮಳೆ ಭದ್ರೆಯ ಒಡಲನ್ನು ಮತ್ತಷ್ಟು ತುಂಬುತ್ತಿದೆ. ನಿತ್ಯವೂ ಬಹಳಷ್ಟು ನೀರು ಹರಿದು ಗಮ್ಯದೆಡೆಗೆ ಸಾಗುತ್ತಿರುವುದು ಭದ್ರೆಯ ವಿಸ್ತಾರ ಬದಲಾಗುತ್ತಲೇ ಇದೆ.
ಬೇಸಿಗೆಯಲ್ಲಿ ಪೇಲವವಾಗಿ ಹರಿಯುವ ಭದ್ರೆಯನ್ನು ಕಂಡು ದಾವಣಗೆರೆಯ ಹಿರಿಯ ರೈತ ಹೋರಾಟಗಾರ ನರಸಿಂಹಪ್ಪ ಹಿಂದೊಮ್ಮೆ ‘ಭದ್ರೆ ಪಾರ್ಟ್ ಟೈಂ ನದಿ’ ಎಂದೇ ಉದ್ಘರಿಸಿದ್ದರು. ಅವರ ಮಾತಿನ ಮತ್ತೊಂದು ಮಗ್ಗುಲು ಎಂಬಂತೆ ಈಗ ಮಳೆಗಾಲದಲ್ಲಿ ತನ್ನ ಕೆಲಸವನ್ನು ಭಾರಿ ಆವೇಶದಿಂದ ಭದ್ರೆ ಮಾಡುತ್ತಿರುವಂತೆ ಕಾಣುತ್ತಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನದ ಗಂಗಾಮೂಲದಲ್ಲಿ ಭದ್ರೆಯ ಉಗಮ ಎಂದು ಹೇಳಲಾಗುತ್ತದೆ ಅಷ್ಟೇ. ಆದರೆ ನಿಗೂಢ ಪ್ರದೇಶಗಳಲ್ಲಿ ಕಾನನದ ಅಂಚಿನಿಂದ ಹರಿದು ಬರುವ ಭದ್ರೆಯ ಹತ್ತಾರು ಉಪನದಿಗಳ ಉಗಮ ಬಲ್ಲವರೇ ಇಲ್ಲ. ನೂರಾರು ಸಣ್ಣ ಹಳ್ಳಗಳನ್ನು ಕ್ರೋಢೀಕರಿಸಿಕೊಂಡು 25 ಕಿಮೀ ದೂರದ ಕಳಸ ತಲುಪುವ ವೇಳೆಗೆ ಬೃಹದಾಕಾರದ ನದಿಯಾಗಿ ಭದ್ರೆಯಲ್ಲಿ ಆಗುವ ಮಾರ್ಪಾಟು ಅಚ್ಚರಿ ಮೂಡಿಸುತ್ತದೆ.

ಅದರಲ್ಲೂ ಸುರಿಮಳೆಯ ದಿನಗಳಲ್ಲಿ ಆಕೆಯ ವಿಸ್ತಾರ, ರಭಸ ಮತ್ತು ಕೆಂಬಣ್ಣದ ನೀರು ರೌದ್ರಭಾವ ಮತ್ತು ಭಯ ಮೂಡಿಸುತ್ತವೆ. ಅತ್ಯಂತ ತಣ್ಣನೆಯ ಈ ನದಿಯಲ್ಲಿ ಮಳೆಗಾಲದಲ್ಲಿ ಈಜುವ ಧೈರ್ಯವನ್ನು ಯಾವ ಪ್ರಾಣಿಯೂ ಮಾಡದಿರುವುದು ಸುರಕ್ಷಿತ ನಡವಳಿಕೆಯೇ ಆಗಿದೆ.
‘ ಭದ್ರೆಯ ಎಲ್ಲ ನೀರು ಹರಿದು ಹೋಗಿ ಡ್ಯಾಂ ಸೇರುತ್ತೆ.ನಮಗೆ ಯಾವ ಲಾಭವೂ ಇಲ್ಲ’ ಎಂದು ಸ್ಥಳೀಯರು ಆಗಾಗ್ಗೆ ಸಿನಿಕತೆಯಿಂದ ಉದ್ಘರಿಸುತ್ತಲೇ ಇರುತ್ತಾರೆ. ಆದರೆ ಜಲವಿದ್ಯುತ್ ರೂಪದಲ್ಲಿ ಮತ್ತು ಭದ್ರಾ ಅಣೆಕಟ್ಟಿನ ಆಸರೆಯಲ್ಲಿ ಬೆಳೆಯುವ ಆಹಾರ ಧಾನ್ಯಗಳ ರೂಪದಲ್ಲಿ ನಮಗೆಲ್ಲರಿಗೂ ಸಿಗುವ ಆಹಾರ ಭದ್ರತೆ ಭದ್ರೆಯ ಶಾಶ್ವತ ಕೊಡುಗೆಯೇ ಎಂಬುದನ್ನು ಮರೆತುಬಿಡುತ್ತೇವೆ.
ಮಳೆಗಾಲದಲ್ಲಿ ಮಳೆ ಹೆಚ್ಚಿದಷ್ಟೂ ಬೇಸಿಗೆಯಲ್ಲಿ ಭದ್ರೆಯ ಹರಿವು ಹೆಚ್ಚಾಗಿಯೇ ಇರುತ್ತದೆ ಎಂಬುದು ಕಳಸದ ಎಲ್ಲ ಅನುಭವಿಗಳಿಗೂ ತಿಳಿದ ರಹಸ್ಯವೇ ಆಗಿದೆ. ಈ ಹಿನ್ನೆಲೆಯಲ್ಲಿ ಸುರಿಮಳೆಗೆ ಶಪಿಸುವ ಒಂದು ವರ್ಗ ಇದ್ದರೂ ಅದನ್ನು ಸ್ವಾಗತಿಸುವ ಮತ್ತೊಂದು ವರ್ಗವೂ ಇದೆ ಎಂಬುದನ್ನು ನಾವು ನೆನಪಿಸಿಕೊಳ್ಳಬೇಕಾಗುತ್ತದೆ.
ಅಚ್ಚರಿ ಎಂದರೆ ಕಳಸ ತಾಲ್ಲೂಕಿನ ಜೀವನದಿಯಾದ ಭದ್ರೆಯ ಬಗ್ಗೆ ಸ್ಥಳೀಯರಲ್ಲಿ ದೈವಿಭಾವನೆ ಇಲ್ಲ. ಬದಲಿಗೆ ನದಿಗೆ ಪ್ರತಿವರ್ಷವೂ ಮಲಿನ ಸೇರಿಸುವ ಕೆಲಸ ಹೆಚ್ಚುತ್ತಲೇ ಇದೆ. ಇದಕ್ಕೆ ವ್ಯತಿರಿಕ್ತವಾಗಿ ಭದ್ರಾ ಅಣೆಕಟ್ಟಿನ ನೀರು ಬಳಕೆದಾರರು ಪ್ರತಿ ಮಳೆಗಾಲದಲ್ಲಿ ಇಲ್ಲಿಗೆ ಬಂದು ಭದ್ರೆಗೆ ಪೂಜೆ ಸಲ್ಲಿಸುವುದನ್ನು ಮಾತ್ರ ಮರೆಯುವುದಿಲ್ಲ.
