ಕಳಸ:ಕಳಸ-ಬಾಳೆಹೊನ್ನೂರು ಮಧ್ಯೆ ಆಗಾಗ್ಗೆ ರಸ್ತೆ ಸಂಪರ್ಕ ಕಡಿತಕ್ಕೆ ಕಾರಣವಾಗಿದ್ದ ಮಹಾಲ್ಗೋಡು ಸೇತುವೆ ಪುನರ್ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ.ಗಂಗಾಮೂಲ-ಕೊಟ್ಟಿಗೆಹಾರ ಹೆದ್ದಾರಿಯ ಮಹಾಲ್ಗೋಡು ಪ್ರದೇಶದಲ್ಲಿ ಹೊಸದಾಗಿ ಸೇತುವೆ ನಿರ್ಮಿಸಲು ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆ ದೊರೆತಿದೆ.
ಭದ್ರಾ ನದಿಯ ಉಪನದಿಗೆ ಅಡ್ಡಲಾಗಿ ಈ ಹಿಂದೆ ನಿರ್ಮಿಸಿದ್ದ ಕಿರುಸೇತುವೆ ಶಿಥಿಲವಾಗಿತ್ತು.ಇದರಿಂದ ಪ್ರತಿ ಬಾರಿ ಮಳೆ ಹೆಚ್ಚಾದಾಗ ಮಹಾಲ್ಗೋಡು ಸೇತುವೆ ಮೇಲೆ ನೀರು ಹರಿಯುತ್ತಿತ್ತು. ಗಂಟೆಗಳ ಕಾಲ ಕಳಸ-ಬಾಳೆಹೊನ್ನೂರು ರಸ್ತೆ ಸಂಪರ್ಕ ಕಡಿದು ಹೋಗುತ್ತಿತ್ತು. ಜೊತೆಗೆ ಆಸುಪಾಸಿನ ಕೃಷಿಕರ ಜಮೀನಿಗೂ ಪ್ರತಿ ವರ್ಷ ನೀರು ನುಗ್ಗಿ ಅನಾಹುತ ಆಗುತ್ತಿತ್ತು.

ಕಳೆದ ಮೇ ತಿಂಗಳಲ್ಲಿ ಕೂಡ ಭಾರಿ ಮಳೆ ಸುರಿದಾಗ ಕೆಲ ಜಾನುವಾರುಗಳು ನೀರುಪಾಲಾಗಿದ್ದವು. ಸ್ಥಳೀಯರು ಕೂಡ ಕೂದಲೆಳೆಯಿಂದ ಬಚಾವ್ ಆಗಿದ್ದರು. ಮಹಾಲ್ಗೋಡಿನಲ್ಲಿ ಎತ್ತರದ ಸೇತುವೆ ನಿರ್ಮಿಸಬೇಕು ಎಂಬುದು ದಶಕದ ಬೇಡಿಕೆ ಆಗಿತ್ತು.
ಈ ಬಗ್ಗೆ ಶಾಸಕಿ ನಯನಾ ಮೋಟಮ್ಮ ಲೋಕೋಪಯೋಗಿ ಇಲಾಖೆಯ ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಗಳ ಗಮನ ಸೆಳೆದಿದ್ದರು. ಪರಿಣಾಮವಾಗಿ ಮಹಾಲ್ಗೋಡಿನಲ್ಲಿ 3 ಕೋಟಿ ವೆಚ್ಚದಲ್ಲಿ ಸೇತುವೆ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಶಿವಮೊಗ್ಗದ ಮುಖ್ಯ ಎಂಜಿನಿಯರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಮಹಾಲ್ಗೋಡಿನಲ್ಲಿ ಸೇತುವೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕ ಬಗ್ಗೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ. ಬಹುಕಾಲದ ಬೇಡಿಕೆ ಈಡೇರುವ ಬಗ್ಗೆ ಗ್ರಾಮದಲ್ಲಿ ಸಂತಸ ಕಂಡು ಬಂದಿದೆ.
