ಕಳಸ:ಕಳಸ ತಾಲ್ಲೂಕಿನಲ್ಲಿ ಕಾಡುಕೋಣಗಳ ಉಪಟಳ ಮಿತಿ ಮೀರಿದ್ದು ಇಂದು ವೃದ್ಧರೊಬ್ಬರನ ಮೇಲೆ ಕಾಡುಕೋಣ ದಾಳಿ ಮಾಡಿದೆ.
ಮುಜೇಕಾನು ಸಮೀಪದ ನೆಲ್ಲಿಕೋಟ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಕಾಡುಕೋಣ ತಿವಿದು ತೋಟ ಕಾರ್ಮಿಕ ಸುಬ್ಬೇಗೌಡ ಅವರಿಗೆ ಗಾಯಗಳಾಗಿವೆ.

ಪರಿಶಿಷ್ಟ ವರ್ಗದ ಕೂಲಿ ಕಾರ್ಮಿಕ 65 ವರ್ಷದ ಸುಬ್ಬೇಗೌಡ ನಲ್ಲಿಕೋಟದ ಸುಬ್ರಮಣ್ಯ ಅವರ ತೋಟದ ಕೆಲಸಕ್ಕೆ ಭಾನುವಾರ ತೆರಳಿದ್ದರು. ಕೆಲ;ಸ ಮಾಡುತ್ತಿದ್ದಾಗ ಮಧಾಹ್ನ 2.30ರ ವೇಳೆಗೆ ಇದ್ದಕ್ಕಿದ್ದಂತೆ ಅವರ ಮೇಲೆ ಕಾಡುಕೋಣ ಎರಗಿದೆ.ಸುಬ್ಬೇಗೌಡ ಅವರನ್ನು ಎತ್ತಿ ದೂರಕ್ಕೆ ಎಸೆದಿದೆ.
ಜೊತೆಯಲ್ಲಿದ್ದ ಮತ್ತೊಬ್ಬ ಕಾರ್ಮಿಕ ಮಂಜಪ್ಪ ಮೆಣಸಿನ ಬಳ್ಳಿ ಮರೆಯಲ್ಲಿ ನಿಂತು ತಪ್ಪಿಸಿಕೊಂಡರು.ಘಟನೆ ನಡೆದಾಗ ತೋಟದ ಮಾಲೀಕ ಕೂಡ ಅಸಹಾಯಕರಾಗಿ ಸ್ಥಳದಲ್ಲೇ ಇದ್ದರು. ಸುಬ್ಬೇಗೌಡ ಅವರ ತಲೆ, ಕುತ್ತಿಗೆಯಲ್ಲಿ ರಂಧ್ರಗಳು ಆಗಿದ್ದು ರಕ್ತಸ್ರಾವ ಆಗಿದೆ. ಕೋಣ ಎಸೆದ ಹೊಡೆತಕ್ಕೆ ಸುಬ್ಬೇಗೌಡ ಅವರ ಬೆನ್ನು ಮೂಳೆಗೆ ಪೆಟ್ಟಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಡುಕೋಣದ ದಾಳಿಯಿಂದ ಗಾಯಗೊಂಡಿರುವ ಸುಬ್ಬೇಗೌಡರಿಗೆ ಅರಣ್ಯ ಇಲಾಖೆ ಪರಿಹಾರ ನೀಡಬೇಕು.ಅವರ ಚಿಕಿತ್ಸೆಯ ಪೂರ್ಣ ವೆಚ್ಚವನ್ನು ಇಲಾಖೆ ಭರಿಸಬೇಕು ಎಂದು ಕಳಸ ತಾಲ್ಲೂಕು ಗೌಡಲು ಜನಾಂಗದ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅನಿಲ್ ಮುಜೇಕಾನು ಆಗ್ರಹಿಸಿದ್ದಾರೆ.
