ರವಿ ಕೆಳಂಗಡಿ
ಕಳಸ:ನಿನ್ನೆ ರಾತ್ರಿ ನಡೆದ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯಲ್ಲಿ ಕಂಡು ಬಂದ ಜನಸ್ತೋಮ ಕಳಸದಲ್ಲಿ ದೊಡ್ಡ ದಾಖಲೆಯೇ ಸರಿ. ಸುಮಾರು 5,000 ಜನರು ಕಳಸದಂತಹ ಪುಟ್ಟ ಪಟ್ಟಣದಲ್ಲಿ ಒಂದು ಉತ್ಸವದ ವಿಷಯದಲ್ಲಿ ಒಗ್ಗೂಡುವುದು ನಿಜಕ್ಕೂ ತಮಾಷೆಯಲ್ಲ.
2 ತಿಂಗಳ ಹಿಂದೆ ಚಿತ್ರ ನಿರ್ಮಾಪಕ ರವಿ ರೈ , ಕಳಸದಲ್ಲಿ ವಿನೂತನವಾಗಿ ಗಣಪತಿ ಕೂರಿಸುವ ಯೋಚನೆ ಹಂಚಿಕೊಂಡಿದ್ದರು. ಇಡೀ ಕಳಸ ತಾಲ್ಲೂಕಿನ ವ್ಯಾಪ್ತಿಗೆ ಅನ್ವಯಿಸುವ ಗಣಪತಿ ಕೂರಿಸೋಣ ಎಂದು ಹೇಳಿದ್ದರು. ಅವರು ಅಂದು ಹೇಳಿದ ಮಾತು ಕಳೆದ 2 ತಿಂಗಳ ಅಲ್ಪಾವಧಿಯಲ್ಲೇ ಬಲಿತು ಬೃಹದಾಕಾರ ಪಡೆದಿದ್ದು ತಮಾಷೆಯ ಸಂಗತಿ ಅಲ್ಲ.ಅದರ ಹಿಂದೆ ಅವಿರತ ಶ್ರಮ, ಬದ್ಧತೆ ಇದೆ.
ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಪಟ್ಟು ಬಿಡದೆ ಸಾಧಿಸುವ ಬ್ರಹ್ಮದೇವ ಅರಮನೆಮಕ್ಕಿ ಮೈದಾನವನ್ನು ಕಳೆದ ಒಂದು ತಿಂಗಳಿಂದ ಬದಲಿಸಿದ ಬಗೆಯೇ ಅಚ್ಚರಿ.ಕೆಸರಿನಿಂದ ಕೂಡಿದ್ದ ಮೈದಾನದಲ್ಲಿ ಅಲ್ಪ ಅವಧಿಯಲ್ಲೇ ಬಯಲು ಸಭಾಮಂಟಪ, ಸುಸಜ್ಜಿತ ಶೌಚಾಲಯ ಸಮುಚ್ಚಯ ನಿರ್ಮಿಸಲು ಬ್ರಹ್ಮದೇವ ಹಗಲಿರುಳು ಅರಮನೆಮಕ್ಕಿಯಲ್ಲೇ ಠಿಕಾಣಿ ಹೂಡಿದ್ದರು.
ವಿಶೇಷ ಎಂದರೆ ಐತಿಹಾಸಿಕ ತಾಣವಾದ ಅರಮನೆಮಕ್ಕಿಯನ್ನು ಜನರ ಬಳಕೆಗೆ ವರ್ಷವಿಡೀ ಲಭ್ಯವಾಗುವಂತೆ ರೂಪುರೇಶೆಯನ್ನು ಬ್ರಹ್ಮದೇವ ಸಿದ್ಧಪಡಿಸುತ್ತಿದ್ದಾರೆ. ಶಾಸಕಿ ನಯನಾ ಮೋಟಮ್ಮ ಕೂಡ ಅಗತ್ಯ ಅನುದಾನದ ಭರವಸೆ ನೀಡಿದ್ದಾರೆ.

ಇನ್ನು ಉತ್ಸವದ 9 ದಿನಗಳೂ ಕೂಡ ಅತ್ಯಂತ ವಿಧಿವತ್ತಾದ ಪೂಜೆ ನಡೆದಂತೆಯೇ ಸಾಂಸ್ಕ್ರತಿಕ ಕಾರ್ಯಕ್ರಮಗಳು ಕೂಡ ಉನ್ನತ ಗುಣಮಟ್ಟದಲ್ಲೇ ಇದ್ದವು.ನಾಡಿನ ಹೆಸರಾಂತ ಕಲಾವಿದರ ರಸಮಂಜರಿ, ಕನ್ನಡ, ತುಳು ನಾಟಕಗಳು ಸಾವಿರಾರು ಜನರ ಮನರಂಜಿಸಿತ್ತು. ಸ್ಥಳೀಯ ಪ್ರತಿಭೆಗಳ ಸಂಗೀತ, ನೃತ್ಯ ಪ್ರದರ್ಶನಕ್ಕೂ ಪ್ರತಿದಿನ ಅವಕಾಶ ಇತ್ತು.
ವಿಶೇಷ ಎಂದರೆ 9 ದಿನದ ಮೂರೂ ಹೊತ್ತೂ ಭಕ್ತರಿಗೆ, ಕಲಾವಿದರಿಗೆ ಮತ್ತು ಕಾಯಕರ್ತರಿಗೆ ಊಟ, ಉಪಚಾರದ ವ್ಯವಸ್ಥೆ ಕೂಡ ವ್ಯವಸ್ಥಿತವಾಗಿತ್ತು.ಗಣೇಶೋತ್ಸವದ ಎಲ್ಲ ಕೆಲಸವನ್ನು 100ಕ್ಕೂ ಹೆಚ್ಚು ಕಾರ್ಯಕರ್ತರು ಇಡೀ ದಿನ ಅಚ್ಚುಕಟ್ಟಾಗಿ ನಡೆಸಿ ಪ್ರತಿದಿನ ನಡುರಾತ್ರಿಯ ನಂತರ ಮನೆ ಸೇರುತ್ತಿದ್ದರು. ಅವರ ನಿಷ್ಕಲ್ಮಶ ಸೇವೆಯಿಂದಲೇ ಉತ್ಸವ ಯಶಸ್ವಿಯಾಯಿತು.
ಪೂಜೆಯ 9 ದಿನಗಳಂದೂ ತಾಲ್ಲೂಕಿನ ಮೂಲೆ ಮೂಲೆಯಿಂದ ಬಂದ ಭಕ್ತರು ಸೌಹಾರ್ದ ಗಣಪತಿಯ ಉತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಜಾತಿ, ಧರ್ಮಗಳ ಸಹೃದಯರೂ ಕೂಡ ಗಣೇಶೋತ್ಸವ ಸಮಿತಿಯಲ್ಲಿ ಸ್ಥಾನ ಪಡೆದಿದ್ದರು. ಯಾವುದೇ ಕಟ್ಟುಪಾಡು ಇಲ್ಲದಂತೆ ಉತ್ಸವಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿದರು.

ಭಾನುವಾರ ನಡೆದ ಐತಿಹಾಸಿಕ ಮೆರವಣಿಗೆಯಲ್ಲಿ ಹುಲಿ ಕುಣಿತ, ದೈತ್ಯ ಗೊಂಬೆಗಳು, ದಿಜೆ ಸಂಗೀತ ಯುವಜನರನ್ನು ಹುಚ್ಚೆಬ್ಬಿಸಿ ಕುಣಿಸಿದವು. ಮುಸ್ಲಿಮರು ಮಸೀದಿ ಬಳಿ ನಿಂತು ಮೆರವಣಿಗೆ ವೀಕ್ಷಿಸಿ ಗೌರವ ಸಲ್ಲಿಸಿದರು.
ಸಂತೋಷದ ಸಂಗತಿ ಎಂದರೆ ಸೌಹಾರ್ದ ಗಣಪತಿ ಸಮಿತಿಯು ಧಾರ್ಮಿಕ ಚಟುವಟಿಕೆ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲೂ ಭಾಗವಹಿಸುವ ಸೂಚನೆ ನೀಡಿದೆ. ಇದು ಕಳಸದ ಮಟ್ಟಿಗೆ ಸಕಾರಾತ್ಮಕ ಚಿನ್ಹೆ ಆಗಿದೆ. ಇಂಥಹ ಯುವ ಸಂಘಟನೆಯ ಅಗತ್ಯ ಕಳಸಕ್ಕೆ ಇದ್ದೇ ಇತ್ತು ಎನ್ನುವ ಭಾವನೆ ಎಲ್ಲರಲ್ಲೂ ಬರುತ್ತಿದೆ.

