ಕಳಸ:ಜೈನ ಸಮಾಜದ ಹಿರಿಯ ಮುಖಂಡ ಕೆ.ಸಿ.ಧರಣೇಂದ್ರ ಅವರಿಗೆ ಇಲ್ಲಿನ ಸರ್ವೋದಯ ತೀರ್ಥ ಸಮಿತಿಯು ಧರ್ಮ ರತ್ನಾಕರ ಬಿರುದು ಪ್ರದಾನ ಮಾಡಿತು.
ಶ್ರೀ ಚಂದ್ರನಾಥ ಸ್ವಾಮಿ ಮತ್ತು ಶ್ರೀ ಪಾಶ್ರ್ವನಾಥ ಸ್ವಾಮಿಯ ನೂತನ ಬಸದಿಯ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರಿಗೆ ಈ ಬಿರುದು ಪ್ರದಾನ ಮಾಡಲಾಯಿತು. ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರದಲ್ಲಿ ಪ್ರಮುಖ ಹೊಣೆ ಹೊತ್ತು ಅತ್ಯಂತ ಸುಂದರವಾದ ಜಿನಾಲಯದ ನಿರ್ಮಾಣದಲ್ಲಿ ಧರಣೇಂದ್ರ ಅವರು ವಹಿಸಿದ ಪಾತ್ರಕ್ಕಾಗಿ ಅವರಿಗೆ ಈ ಬಿರುದು ನೀಡಲಾಯಿತು ಎಂದು ಸರ್ವೋದಯ ತೀರ್ಥ ಸಮಿತಿ ಅಧ್ಯಕ್ಷ ಭೋಜರಾಜ್ ಹೇಳಿದರು.
ಸುಮಾರು 10 ಕೋಟಿ ವೆಚ್ಚದಲ್ಲಿ ಶಿಲಾಮಯವಾಗಿ ನಿರ್ಮಾಣವಾದ ಬಸದಿಗೆ ಧರಣೇಂದ್ರ ಅವರು ಸ್ವತಃ 1 ಕೋಟಿ ರೂಪಾಯಿ ದೇಣಿಗೆ ಕೂಡ ನೀಡಿದ್ದರು. 9 ವರ್ಷಗಳ ಕಾಲ ಬಸದಿಯ ನಿರ್ಮಾಣಕ್ಕೆ ಅಹೋರಾತ್ರಿ ದುಡಿದಿದ್ದರು ಎಂದು ಭೋಜರಾಜ್ ತಿಳಿಸಿದರು.
ಅಭಿನಂದನಾ ಸಮಾರಂಭದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟು ವಿದುಷಾ ಹಾಗೂ ಜೈನ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕೂಡ ಗೌರವಿಸಲಾಯಿತು.
ಸಮಿತಿ ಅಧ್ಯಕ್ಷ ಭೋಜರಾಜ್, ಉಪಾಧ್ಯಕ್ಷ ಅನಿಲ್,ಕಾರ್ಯದರ್ಶಿ ವಿನಯ್, ಸಹ ಕಾರ್ಯದರ್ಶಿ ಅನಿಲ್, ಖಜಾಂಚಿ ಧರಣೇಂದ್ರ ಹೆಬ್ಳೂರು, ಮುಖಂಡರಾದ ಕೆ.ಸಿ. ವಿಜಯ ಕುಮಾರ್, ಸುರೇಶ್ ಕುಮಾರ್, ಹರ್ಷೇಂದ್ರ, ಸುದರ್ಶನ್, ಪ್ರಸಿದ್ಧ ಜೈನ್, ಜಿತೇಂದ್ರ, ಸುಜಿತ್, ಭರತ್ರಾಜ್, ಅಜಿತ್ ಭಾಗವಹಿಸಿದ್ದರು.
