ಕಳಸ:ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಹಲವಾರು ಲೋಪಗಳು ಕಂಡು ಬಂದಿದ್ದು ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಕಳಸ ಘಟಕದ ಅಧ್ಯಕ್ಷ ಶ್ರೀಕಾಂತ್ ಕೆಳಭಾಗ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಫಲಿತಾಂಶ ಘೋಷಣೆ ಆದಾಗಿನಿಂದ ಹಲವಾರು ವಿದ್ಯಾರ್ಥಿಗಳು ಅಸಮಾಧಾನಗೊಂಡಿದ್ದಾರೆ. ಅನೇಕ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಅನೇಕ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ವರ್ಷವಿಡೀ ವ್ಯಾಸಂಗ ಮಾಡಿದರೂ ಮೌಲ್ಯಮಾಪಕರ ತಪ್ಪಿನಿಂದ ಅನುರ್ತೀರ್ಣಗೊಂಡ ಮಕ್ಕಳೂ ಮಾನಸಿಕವಾಗಿ ಘಾಸಿಗೊಂಡಿದ್ದಾರೆ ಎಂದು ಶ್ರೀಕಾಂತ್ ತಿಳಿಸಿದ್ದಾರೆ.
ಮರುಮೌಲ್ಯಮಾಪನದಲ್ಲಿ ಕೆಲ ವಿದ್ಯಾರ್ಥಿಗಳಿಗೆ ಬಹುತೇಕ ವಿಷಯಗಳಲ್ಲಿ 2ಕ್ಕಿಂತ ಹೆಚ್ಚು ಅಂಕಗಳು ಸಿಕ್ಕಿದ್ದು ಅನೇಕರಿಗೆ ಒಂದೇ ವಿಷಯದಲ್ಲಿ 20ಕ್ಕೂ ಹೆಚ್ಚು ಅಂಕಗಳು ಸಿಕ್ಕಿದೆ. ಇದನ್ನು ಗಮನಿಸಿದಾಗ ಮೌಲ್ಯಮಾಪಕರು ಶ್ರದ್ಧೆಯಿಂದ ಕೆಲಸ ಮಾಡಿಲ್ಲ ಎಂದು ತಿಳಿಯುತ್ತದೆ ಎಂದೂ ಶ್ರೀಕಾಂತ್ ದೂರಿದ್ದಾರೆ.
ಮಕ್ಕಳ ಫಲಿತಾಂಶದಲ್ಲಿ ಆದ ತಪ್ಪಿನಿಂದಾಗಿ ಮಕ್ಕಳ ಜೊತೆಗೆ ಪೋಷಕರು ಕೂಡ ಬೇಸರಗೊಂಡಿದ್ದಾರೆ. ಶಿಕ್ಷಕರು ಕೂಡ ನಿರಾಸೆ ಅನುಭವಿಸುತ್ತಾರೆ. ಆದ್ದರಿಂದ ಇಂತಹ ಪ್ರಮಾದ ಎಸಗುವ ಮೌಲ್ಯಮಾಪಕರನ್ನು ಕಪ್ಪು ಪಟ್ಟಿಗೆ ಸೇರಿಸಿ ಅವರ ವಿರುದ್ಧ ಕಠಿಣ ಕ್ರಮ ವಹಿಸಬೇಕು ಎಂದು ಶ್ರೀಕಾಂತ್ ಒತ್ತಾಯಿಸಿದ್ದಾರೆ.
