ಕಳಸ:ಹಿರೇಬೈಲು ಗ್ರಾಮದ ಯುವಕ ಮೋಹಿತ್ ಮೋನಪ್ಪ ನಿರ್ದೇಶನದ ಕಿರುಚಿತ್ರ ಬಂಗ್ಲೆ ಕ್ರಾಸ್’ ನಿನ್ನೆ ರಾತ್ರಿ ಬೈನೆಕಾಡು ರೆಸಾರ್ಟಿನಲ್ಲಿ ಬಿಡುಗಡೆ ಆಯಿತು. ಮಂಗಳೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಮೋನಪ್ಪ ಸ್ವತಃ ಲೇಖಕರೂ ಆಗಿದ್ದು ಕಿರು ಚಿತ್ರ ನಿರ್ಮಾಣದ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರ ಅಣ್ಣ ಮೋಹನ್ ಬಂಗ್ಲೆ ಕ್ರಾಸ್ ಚಿತ್ರದ ನಿರ್ಮಾಪಕರಾಗಿ ತಮ್ಮನ ಸಾಹಸಕ್ಕೆ ಕೈ ಜೋಡಿಸಿದ್ದಾರೆ.
ಸರಳ ಸಮಾರಂಭದಲ್ಲಿ ಚಿತ್ರ ನಿರ್ಮಾಪಕ ರವಿ ರೈ ಬಂಗ್ಲೆ ಕ್ರಾಸ್ ಬಿಡುಗಡೆ ಮಾಡಿದರು. ಆನಂತರ ನಡೆದ ಪ್ರೀಮಿಯರ್ ಶೋ ವೀಕ್ಷಿಸಿ ಮಾತನಾಡಿದ ಅವರು, ನಿರ್ದೇಶಕ ಮೋಹಿತ್ ಮೋನಪ್ಪ ಸೇರಿದಂತೆ ಹಿರೇಬೈಲು ಆಸುಪಾಸಿನ ಅನೇಕ ಯುವಕರು ನಟಿಸಿರುವ ಬಂಗ್ಲೆ ಕ್ರಾಸ್ ರೋಮಾಂಚನ ನೀಡುತ್ತದೆ. ಈ ಚಿತ್ರ ಸ್ಥಳೀಯ ಜನರ ಜೀವನ, ಸಮಸ್ಯೆ, ಸಂಸ್ಕ್ರತಿಯ ಪ್ರತಿಬಿಂಬ ಆಗಿದೆ ಎಂದರು.

ನಿರ್ದೇಶಕ ಮೋಹಿತ್ ಮೋನಪ್ಪ ಮಾತನಾಡಿ, ನಮ್ಮ ಸುತ್ತಲಿನ ಪರಿಸರದಲ್ಲಿ ನಡೆದಿರಬಹುದಾದ ನೈಜ ಘಟನೆ ಆಧರಿಸಿ ಈ ಚಿತ್ರಕಥೆ ಹೆಣೆಯಲಾಗಿದೆ. ನಮ್ಮ ಗೆಳೆಯರೇ ನಟರು, ಸಹ ನಿರ್ದೇಶಕರು, ಸಂಗೀತ ನಿರ್ದೇಶಕರು, ಛಾಯಾಗ್ರಾಹಕರು ಆಗಿದ್ದರಿಂದ ಚಿತ್ರ ನಿರ್ಮಾಣ ತಡವಾದರೂ ಅತ್ಯಂತ ತೃಪ್ತಿ ತಂದಿದೆ ಎಂದರು.
ಹಿರೇಬೈಲು ಆಸುಪಾಸಿನಲ್ಲೆ ಬಹುತೇಕ ಚಿತ್ರೀಕರಣ ನಡೆದಿರುವ ಈ ಕಿರುಚಿತ್ರದಲ್ಲಿ ಕಾಫಿ ತೋಟವೊಂದರ ಮಾಲೀಕ ತನ್ನ ಸಂಪತ್ತಿನ ವೃದ್ಧಿಗಾಗಿ ಕಾರ್ಮಿಕ ಸಮುದಾಯದ ಬಡಯುವತಿಯರನ್ನು ಅಮಾವಾಸ್ಯೆಯಂದು ಬಲಿ ಕೊಡುವ ಕಥೆ ಇದೆ. ಈ ಅನಿಷ್ಟ ಪದ್ಧತಿಯನ್ನು ಊರಿನ ಯುವಕರು ಅರಿತು ತೋಟದ ಮಾಲೀಕನನ್ನೇ ಹತ್ಯೆ ಮಾಡುವುದರೊಂದಿಗೆ ಚಿತ್ರ ಮುಗಿಯುತ್ತದೆ.
ದಶಕಗಳ ಹಿಂದೆ ಕರಾವಳಿಯಿಂದ ಮಲೆನಾಡಿಗೆ ಬಂದ ಆದಿ ದ್ರಾವಿಡ ಸಮುದಾಯದ ಬಹುತೇಕ ನಟರು ಮತ್ತು ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಿರುವುದು ವಿಶೇಷ. ಚಿತ್ರವನ್ನು ಯೂಟ್ಯೂಬ್ ಮೂಲಕ ವೀಕ್ಷಿಸಬಹುದಾಗಿದೆ.
