ಕಳಸ:ಮೂಡಿಗೆರೆಯಲ್ಲಿ ನವರಾತ್ರಿ ಪ್ರಯುಕ್ತ ಮಹಿಳೆಯರಿಗೆ ಬಾಗಿನ ಅರ್ಪಿಸುತ್ತಿರುವ ಶಾಸಕಿ ನಯನಾ ಮೋಟಮ್ಮ ಕಳಸದಲ್ಲೂ ಆ ಸಂಪ್ರದಾಯವನ್ನು ಈ ವರ್ಷದಿಂದ ಆರಂಭಿಸಿದ್ದಾರೆ.

ನವರಾತ್ರಿಯ ಪ್ರಯುಕ್ತ ಪಟ್ಟಣದಲ್ಲಿ ದುರ್ಗಾದೇವಿಯ ಆರಾಧನೆ ವಿಜೃಂಭಣೆಯಿಂದ ನೆರವೇರುತ್ತಿದೆ. ಹೂವಿನಪೂಜೆಯ ಸಡಗರದಲ್ಲಿ ಭಾಗವಹಿಸಲು ಮಂಗಳವಾರ ದುರ್ಗಾಮಂಟಪಕ್ಕೆ ದೊಡ್ಡ ಸಂಖ್ಯೆಯ ಮಹಿಳೆಯರು ಬಂದಿದ್ದರು. ಹೂವಿನ ಪೂಜೆಯ ದಿನ ನಯನಾ ಮೋಟಮ್ಮ ಮಹಿಳೆಯರಿಗೆ ಬಾಗಿನ ಕೊಡುವ ಬಗ್ಗೆ ಬಹಳಷ್ಟು ಪ್ರಚಾರ ಆಗಿತ್ತು.

ಕಳಸ ತಾಲ್ಲೂಕಿನ ವಿವಿಧೆಡೆಯಿಂದ ಬಂದಿದ್ದ 2000 ಮಹಿಳೆಯರಿಗೆ ಶಾಸಕಿ ಬಾಗಿನದ ಜೊತೆಗೆ ಸೀರೆ ವಿತರಿಸಿದರು. ಸೀರೆ ಮತ್ತು ಬಾಗಿನ ಸ್ವೀಕರಿಸಿದ ಮಹಿಳೆಯರು ಅನ್ನಸಂತರ್ಪಣೆಯ ಪ್ರಸಾದ ಸ್ವೀಕರಿಸಿದರು.
ಹೊರನಾಡಿನ ರಾಜಲಕ್ಷ್ಮಿ ಜೋಷಿ, ದುರ್ಗಾಪೂಜಾ ಸಮಿತಿಯ ಅಧ್ಯಕ್ಷ ಭರತ್ರಾಜ್, ಕಾಂಗ್ರೆಸ್ ಮುಖಂಡರಾದ ಕೆ.ಆರ್.ಪ್ರಭಾಕರ್, ಶ್ರೇಣಿಕ, ವೀರೇಂದ್ರ, ವಿಶ್ವನಾಥ ಭಾಗವಹಿಸಿದ್ದರು.
