ಕಳಸ:ತಾಲ್ಲೂಕಿನ ಬಹುತೇಕ ಪ್ರಮುಖ ರಸ್ತೆಗಳು ಮತ್ತು ಗ್ರಾಮೀಣ ರಸ್ತೆಗಳ ಸ್ಥಿತಿ ಹದಗೆಟ್ಟಿದ್ದರೂ ದುರಸ್ತಿಗಾಗಿ ಸರ್ಕಾರದಿಂದ ಅನುದಾನ ಬರುತ್ತಿಲ್ಲ ಎಂದು ಬಿಜೆಪಿ ಕಳಸ ಘಟಕದ ಅಧ್ಯಕ್ಷ ಶ್ರೀಕಾಂತ್ ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳಸ ಮುಖ್ಯ ರಸ್ತೆಯೂ ಸೇರಿದಂತೆ ಎಲ್ಲ ರಾಜ್ಯ ಹೆದ್ದಾರಿಗಳು ಹದಗೆಟ್ಟಿವೆ. ಅದನ್ನು ದುರಸ್ತಿಪಡಿಸುವ ಯಾವಪ್ರಯತ್ನವೂ ನಡೆದಿಲ್ಲ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಅನುದಾನ ಎಲ್ಲಿಗೆ ಹೋಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ತುರ್ತಾಗಿ ರಸ್ತೆ ದುರಸ್ತಿ ಆರಂಭಿಸದಿದ್ದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದರು.
ಶಾಸಕರು ಅನೇಕ ರಸ್ತೆ, ಸೇತುವೆಗಳಿಗೆ ಗುದ್ದಲಿಪೂಜೆ ನರವೇರಿಸಿ ವರ್ಷ ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಈ ಕೆಲಸಗಳು ಕೂಡಲೇ ಆರಂಭವಾಗಬೇಕು ಎಂದರು.ಕಳಸ ತಾಲ್ಲೂಕಿನಲ್ಲಿ ವನ್ಯಜೀವಿಗಳ ಹಾವಳಿ ಮಿತಿ ಮೀರಿದ್ದು ಕೃಷಿಕರ ಬದುಕು ಸಂಕಷ್ಟದಲ್ಲಿದೆ ಎಂದೂ ಶ್ರೀಕಾಂತ್ ತಿಳಿಸಿದರು.
ಪಕ್ಷದ ಕಳಸ ಘಟಕದ ಕಾರ್ಯದರ್ಶಿ ಮಹೇಶ್ ಮಾತನಾಡಿ, ತಾಲ್ಲೂಕಿನ ರಸ್ತೆ ದುರಸ್ತಿಗೆ ಮಳೆ ನೆಪ ಹೇಳಲಾಗುತ್ತಿದೆ. ಅನಗತ್ಯವಾಗಿದ್ದ ಜಾತಿಗಣತಿ ಕಾರಣಕ್ಕೆ ಮಲೆನಾಡಿನ ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಹಿನ್ನಡೆ ಅಗಿದೆ ಎಂದರು.
ಬಿಜೆಪಿ ಮುಖಂಡರಾದ ಸುಜಯಾ, ನಾಗೇಶ್, ಸುಂದರ ಶೆಟ್ಟಿ ಇದ್ದರು.
ಶಾಸಕರ ಬಗ್ಗೆ ಅಪಪ್ರಚಾರ: ಕಾಂಗ್ರೆಸ್ ಕಿಡಿ
ಕಳಸ:ತಾಲ್ಲೂಕಿನ ರಸ್ತೆಗಳ ದುರಸ್ತಿ ಮಾಡಿಲ್ಲ ಎಂದು ಆರೋಪಿಸಿ ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ದೂರಿದೆ.
ಈ ಬಗ್ಗೆ ಪಟ್ಟಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಪಕ್ಷದ ಕಳಸ ಬ್ಲಾಕ್ ಅಧ್ಯಕ್ಷ ಶ್ರೇಣಿಕ, ಕಳೆದ ಏಪ್ರಿಲ್ನಿಂದ ಈವರೆಗೆ 140 ದಿನ ಮಳೆ ಸುರಿದಿದೆ. ಇದರಿಂದ ರಸ್ತೆ ಕಾಮಗಾರಿಗಳನ್ನು ಆರಂಭಿಸಲು ಆಗಿಲ್ಲ. ಕುದುರೆಮುಖ, ಕಳಸೇಶ್ವರ ದೇವಸ್ಥಾನ ಸೇರಿದಂತೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅನೇಕ ರಸ್ತೆ ಕಾಮಗಾರಿಗಳು ಸದ್ಯದಲ್ಲೇ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು.
ತಾಲ್ಲೂಕಿನ ಹಳ್ಳಿ ಹಳ್ಳಿಯಲ್ಲೂ ರಸ್ತೆ ಕಾಮಗಾರಿ ನಡೆಯುತ್ತಿದೆ.ಕಗ್ಗನಳ್ಳ ತೂಗುಸೇತುವೆ ಮತ್ತು ರಸ್ತೆಗೆ 9 ಕೋಟಿ ರೂಪಾಯಿ, ನೆಲ್ಲಿಬೀಡು ಸೇತುವೆಗೆ 5 ಕೋಟಿ ರೂಪಾಯಿ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ. 5 ಕೋಟಿ ವೆಚ್ಚದಲ್ಲಿ ಕಳಸ ತಾಲ್ಲೂಕು ಕಚೇರಿ ಒಂದು ವರ್ಷದ ಅವಧಿಯಲ್ಲಿ ಕೆಲಸ ಮುಗಿದು ಕಾರ್ಯಾರಂಭ ಮಾಡಲಿದೆ. ತನ್ನ ಅವಧಿಯಲ್ಲಿ ಅಕ್ರಮ ಕಾಮಗಾರಿಗಳನ್ನು ಮಾಡಿ ಹಣ ಕೊಳ್ಳೆ ಹೊಡೆದ ಬಿಜೆಪಿ ಮುಖಂಡರು ಬಹಿರಂಗ ಚರ್ಚೆಗೆ ಬರಬೇಕು ಎಂದು ಅವರು ಸವಾಲು ಹಾಕಿದರು.
ಕಾಂಗ್ರೆಸ್ ಮುಖಂಡ ಹಿತ್ತಲಮಕ್ಕಿ ರಾಜೇಂದ್ರ ಮಾತನಾಡಿ, ಕಳಸ ತಾಲ್ಲೂಕಿನ ಬಗ್ಗೆ ಅಭಿಮಾನದಿಂದ ಶಾಸಕಿ ನಯನಾ ಮೋಟಮ್ಮ ವಿಶೇಷ ಅನುದಾನ ಕೊಡುತ್ತಿದ್ದಾರೆ. ಅವರ ಬಗ್ಗೆ ದೂಷಣೆ ಮಾಡುವ ಬದಲು ಬಿಜೆಪಿ ಮುಖಂಡರು ತಮ್ಮ ಸಂಸದರು ನಮ್ಮ ಊರಿನ ರಸ್ತೆಗಳಿಗೆ ಪಿಎಂಜಿಎಸ್ವೈ ಯೋಜನೆಯಲ್ಲಿ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂದು ತಿಳಿಸಬೇಕು. ಜೊತೆಗೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯರು ಕೂಡ ಕಳಸಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದೂ ತಿಳಿಸಬೇಕು ಎಂದು ಸವಾಲು ಹಾಕಿದರು.
ಅಬ್ದುಲ್ ಶುಕೂರ್ ಮಾತನಾಡಿ, ನಮ್ಮ ಶಾಸಕಿ ಮತ್ತು ಸಂಸದರ ಕೆಲಸ ಹೋಲಿಸಿ ನೋಡುವಂತೆ ಬಿಜೆಪಿ ಮುಖಂಡರಿಗೆ ಕಿವಿಮಾತು ಹೇಳಿದರು. ಗ್ರಾಮ ಪಂಚಾಯಿತಿ ಸದಸ್ಯ ವೀರೇಂದ್ರ ಮಾತನಾಡಿ, ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕಳಸ ಪಟ್ಟಣದ ಗಂಟೆಮಕ್ಕಿ, ಕೆಳಬೈಲು, ಓಣಿಗಂಡಿ, ಗೋರಿಮಕ್ಕಿ, ದೇವರಗುಡ್ಡ, ಗಣಪತಿಕಟ್ಟೆ, ಹಿಂದೂ ಸ್ಮಶಾನ ಮತ್ತು ಕೊಂಡದಮನೆ ರಸ್ತೆಗಳ ಅಭಿವೃದ್ಧಿ ಆಗಿದೆ. ಬಲಿಗೆ ಪ್ರದೇಶದಲ್ಲಿ 1 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಆಗಿದೆ ಎಂದರು.
ಕಳಸ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗಣೇಶ್ ಭಟ್ ಮಾತನಾಡಿ, ತಾಲ್ಲೂಕಿನ 8000 ಮನೆಗಳಿಗೆ ಉಚಿತ ವಿದ್ಯುತ್ ಮತ್ತು 9000 ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ತಿಂಗಳಿಗೆ 2000 ರೂಪಾಯಿ ಸಹಾಯಧನ ನೀಡಲಾಗುತ್ತಿದೆ ಎಂದರು.
