ರವಿ ಕೆಳಂಗಡಿ
ಕಳಸ:ಕಳೆದ ವಾರ ತಾಲ್ಲೂಕಿನ ಬಹುತೇಕ ಕಾಫಿ ತೋಟಗಳಲ್ಲಿ ಅರಳಿರುವ ಹೂಗಳನ್ನು ಕಂಡು ಬೆಳೆಗಾರರು ಕಣ್ತುಂಬಿಕೊಂಡಿದ್ದಾರೆ. ತೋಟದ ಮೂಲೆ ಮೂಲೆಗೂ ಹೋಗಿ ಮುಂದಿನ ಸಾಲಿನ ಫಸಲು ಅಂದಾಜಿಸುವ ಕೆಲಸದಲ್ಲಿ ತೊಡಗಿದ್ದಾರೆ.ಮಾರ್ಚ್ ತಿಂಗಳಲ್ಲಿ ಸಕಾಲಕ್ಕೆ ಸುರಿದ ಮಳೆಗಳು ಬೆಳೆಗಾರರಲ್ಲಿ ಭರವಸೆ ಮೂಡಿಸಿದೆ.
ರೊಬಸ್ಟಾ ತೋಟದಲ್ಲಿ ಬೆಳ್ಳಗೆ ಅರಳಿ ಪರಿಮಳ ಸೂಸುತ್ತಿರುವ ಕಾಫಿ ಹೂವು ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿ ಭವಿಷ್ಯದ ಬಗ್ಗೆ ನಂಬಿಕೆ ಹುಟ್ಟಿಸಿದೆ.
ಕಳೆದ 25 ವರ್ಷಗಳಿಂದಲೂ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಕಾಫಿ ಉದ್ಯಮಕ್ಕೆ ಈಗ ಶುಕ್ರದೆಸೆ. ರೊಬಸ್ಟಾ ಚೆರ್ರಿ ಕಾಫಿ ಚೀಲಕ್ಕೆ 12 ಸಾವಿರ ಬೆಲೆ ಪಡೆದರೆ ಅರೇಬಿಕಾ ಚೆರ್ರಿ ಧಾರಣೆ 15 ಸಾವಿರ ದಾಟಿದೆ.
ಮುಂದಿನ ಒಂದೆರಡು ವರ್ಷವೂ ಕಾಫಿ ಬೆಲೆ ಈಗಿನ ಮಟ್ಟದಲ್ಲೇ ಉಳಿಯಲಿದೆ ಎಂಬ ಮಾರುಕಟ್ಟೆ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕಾಫಿ ತೋಟದಲ್ಲಿ ಗರಿಷ್ಟ ಫಸಲು ಕೊಯ್ಯುವ ಯತ್ನ ನಡೆದಿದೆ.
ಬೆಲೆ ಏರಿದ ಬೆನ್ನಲ್ಲೇ ಕಾಫಿ ತೋಟಗಳ ನಿರ್ವಹಣೆ ಬಗ್ಗೆ ಬೆಳೆಗಾರರಲ್ಲಿ ಹುರುಪು ಮೂಡಿದೆ.ಈ ವರ್ಷ ಕಾಫಿ ಮಾರಾಟ ಮಾಡಿದ ಅನೇಕ ಬೆಳೆಗಾರರು ತೋಟಗಳಲ್ಲಿ ಶಾಶ್ವತ ಸ್ಪ್ರಿಂಕ್ಲರ್ ವ್ಯವಸ್ಥೆಗೆ ಬಹಳಷ್ಟು ವೆಚ್ಚ ಮಾಡುತ್ತಿದ್ದಾರೆ.ಈಗಾಗಲೇ ನೀರಿನ ಸೌಕರ್ಯ ಇರುವ ಬೆಳೆಗಾರರು ನೀರು ಪೂರೈಕೆ ಮಾಡಿದ್ದರೆ ಉಳಿದವರು ಕಾರ್ಮಿರ ಕೊರತೆಯಿಂದ ನೀರು ಹಾಯಿಸಲು ವಿಫಲರಾಗಿ ಕೈ ಚೆಲ್ಲಿದ್ದರು.ಅವರು ಆಗಸದತ್ತಲೇ ಚಿತ್ತ ಹರಿಸಿ ಸಕಾಲಿಕ ಹೂಮಳೆಗೆ ಕಾದಿದ್ದರು.
ಮಾರ್ಚ್ 12ರಂದು ಕಳಸ ತಾಲ್ಲೂಕಿನ ಬಹುತೇಕ ಪ್ರದೇಶದಲ್ಲಿ ಸುರಿದ ಮೊದಲ ಹೂಮಳೆ ಕಾಫಿ ತೋಟಗಳಲ್ಲಿ ಸಂಚಲನ ತಂದಿತು. ಸಾವಿರಾರು ಎಕರೆ ತೋಟದಲ್ಲಿ ಕಾಫಿ ಮೊಗ್ಗು ಬಿರಿದು ಹೂ ಅರಳಲು ಈ ಮಳೆ ಭೂಮಿಕೆ ಒದಗಿಸಿತು.ಜೊತೆಗೆ 18ರಂದು ಮತ್ತೆ ಸುರಿದ ಎರಡನೇ ಮಳೆ ಕಾಫಿ ಹೂವು ಆರೋಗ್ಯಪೂರ್ಣವಾಗಿ ಅರಳಲು ಪ್ರೇರಣೆ ನೀಡಿತು.
‘ಕಳೆದ 20 ವರ್ಷದಲ್ಲಿ ಇಷ್ಟು ಸರಿಯಾಗಿ ಹೂಮಳೆ ಆಗಿರಲಿಲ್ಲ. ಈ ವರ್ಷ ಆರೋಗ್ಯಪೂರ್ಣವಾಗಿ ಕಾಫಿ ಹೂವು ಅರಳಿದೆ. ಮುಂದಿನ ವರ್ಷ ಒಳ್ಳೆ ಕಾಫಿ ಕೊಯ್ಯಬಹುದು’ ಎಂದು ಹೊರನಾಡಿನ ಹಿರಿಯ ಬೆಳೆಗಾರ ಜ್ವಾಲನಯ್ಯ ಹೇಳುತ್ತಾರೆ.
‘ಕಾಫಿ ಹೂವು ಅರಳಿದಾಕ್ಷಣ ಬಂಪರ್ ಫಸಲು ಎಂದು ಸುಮ್ಮನೆ ಕೂರುವಂತಿಲ್ಲ. ಗಿಡಗಳಿಗೆ ಸಾಕಷ್ಟು ಗೊಬ್ಬರ, ಸೂಕ್ಷ್ಮ ಪೋಷಕಾಂಶ ಒದಗಿಸಬೇಕು. ಮಳೆಗಾಲಕ್ಕೆ ಮುನ್ನ ಬೋರ್ಡೊ ದ್ರಾವಣ ಸಿಂಪಡಣೆ ಮಾಡಬೇಕು. ಇಲ್ಲದಿದ್ದರೆ ಮಳೆ ಹೆಚ್ಚಾದಾಗ ಶೇ.30ಕ್ಕೂ ಹೆಚ್ಚು ಫಸಲು ನಷ್ಟ ಆಗುವ ಅಪಾಯ ಇದೆ’ ಎಂದು ಬೆಳೆಗಾರ ಬರ್ಗಲ್ ಭೋಜರಾಜ್ ಹೇಳುತ್ತಾರೆ.
ಮಾರ್ಚ್ ತಿಂಗಳಲ್ಲಿ ಸಕಾಲಕ್ಕೆ ಸುರಿದ ಮಳೆ ಬೆಳೆಗಾರರ ಕೋಟಿಗಟ್ಟಲೆ ಮೊತ್ತದ ಡೀಸೆಲ್ ಮತ್ತು ವಿದ್ಯುತ್ ಉಳಿಸಿತು. ಮುಂದಿನ ಸಾಲಿನ ಫಸಲು ಖಾತರಿಪಡಿಸಿದ ಈ ಮಳೆ ಬೆಳೆಗಾರರ ಪಾಲಿನ ಆಪತ್ಭಾಂಧವ ಎನಿಸಿದೆ.
ಕಾಫಿ ಬೆಲೆ ಗರಿಷ್ಟ ಮಟ್ಟಕ್ಕೆ ಏರಿದ ಹಿನ್ನೆಲೆಯಲ್ಲಿ ಕಾಫಿ ಹೂ ಕೂಡ ಬೆಲೆ ಬಾಳುವ ಹೂಗಳ ಪಟ್ಟಿಗೆ ಸೇರಿದೆ.ಆ ಹೂಗಳ ಮಕರಂದ ಹೀರಿದ ಜೇನು ನೊಣಗಳು ಕಾಫಿ ಹೂವಿನ ಪರಿಮಳದ ಜೆನು ಉತ್ಪಾದಿಸುವಲ್ಲಿ ತೊಡಗಿವೆ.
