ರವಿ ಕೆಳಂಗಡಿ
ಈ ವರ್ಷದ ಆರಂಭದಿಂದ ಏರಿಕೆಯ ಹಾದಿಯಲ್ಲಿ ಇದ್ದ ಕಾಫಿ ಧಾರಣೆ ಈಗ ಇಳಿಕೆಯ ಹಾದಿ ಹಿಡಿದಿದೆ.
ಕಳೆದ ಎರಡು ವಾರಗಳಿಂದ ಲಂಡನ್ ಮಾರುಕಟ್ಟೆಯಲ್ಲಿ ರೊಬಸ್ಟಾ ಕಾಫಿ ಧಾರಣೆ ಸತತವಾಗಿ ತನ್ನ ಕಿಮ್ಮತ್ತು ಕಳೆದುಕೊಳ್ಳುತ್ತಿದೆ. ಮಾರ್ಚ್ ತಿಂಗಳಲ್ಲಿ ಒಂದು ಟನ್ಗೆ 5800 ಡಾಲರ್ ಗರಿಷ್ಟ ಧಾರಣೆಯ ಗೌರವ ಪಡೆದಿದ್ದ ಕಾಫಿ ಬೆಲೆ ಈಗ 4600 ಡಾಲರ್ಗೆ ಬಂದು ನಿಂತಿದೆ.
ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಅರೇಬಿಕಾ 7 ವಾರದ ಕನಿಷ್ಟ ಬೆಲೆಗೆ ಇಳಿದಿದ್ದರೆ ಲಂಡನ್ ಮಾರುಕಟ್ಟೆಯಲ್ಲಿ ರೊಬಸ್ಟಾ 6 ತಿಂಗಳ ಕನಿಷ್ಟ ಮಟ್ಟಕ್ಕೆ ಕುಸಿದಿದೆ.ವಿಯೆಟ್ನಾಂ ದೇಶದಲ್ಲಿ ಮುಂದಿನ ಹಂಗಾಮಿಗೆ ಶೇ.7ರಷ್ಟು ರೊಬಸ್ಟಾ ಕಾಫಿ ಮತ್ತು ಬ್ರೆಜಿಲ್ ದೇಶದಲ್ಲಿ ಅರೇಬಿಕಾ ಕಾಫಿ ಅಲ್ಪ ಪ್ರಮಾಣದಲ್ಲಿ ಹೆಚ್ಚಾಗಬಹುದು ಎಂಬ ಊಹೆಯ ಹಿಂದೆಯೇ ಈ ಬೆಲೆ ಇಳಿಕೆ ಶುರು ಆಗಿದೆ.
ಇದರಿಂದ ಪ್ರತಿ ಮೂಟೆ ಕಾಫಿಗೆ 14 ಸಾವಿರ ರೂಪಾಯಿ ಬಂಪರ್ ಬೆಲೆ ಪಡೆದಿದ್ದ ಬೆಳೆಗಾರರು ಈಗ 10 ಸಾವಿರ ರೂಪಾಯಿಗೆ ಮಾರಾಟ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಅನೇಕ ಬೆಳೆಗಾರರು ಜೂನ್ ತಿಂಗಳಲ್ಲಿ 15 ಸಾವಿರ ರೂಪಾಯಿ ಬಂದೇ ಬರುತ್ತದೆ ಎಂಬ ದೃಢ ನಂಬಿಕೆಯಿಂದ 13 ಸಾವಿರ ರೂಪಾಯಿಗೂ ಕಾಫಿ ಮಾರಾಟ ಮಾಡದೆ ಉಳಿಸಿಕೊಂಡಿದ್ದರು. ಆದರೆ ಅವರಿಗೆ ಈಗ ಭ್ರಮಾನಿರಸನ ಆಗಿದೆ.ಆಗ ಕೆಜಿಗೆ 500 ರೂಪಾಯಿ ಇದ್ದ ಕಾಫಿ ಬೇಳೆಯ ಬೆಲೆ ಈಗ 415 ರೂಪಾಯಿಗೆ ಇಳಿದಿದೆ.
ಜಾಗತಿಕವಾಗಿ ಕಾಫಿ ಉತ್ಪಾದನೆಯಲ್ಲಿ ಬಹಳಷ್ಟು ಕೊರತೆ ಇದೆ ಎಂಬ ಕಾರಣಕ್ಕೆ ವರ್ಷದ ಆರಂಭದಲ್ಲಿ ಕಾಫಿ ಧಾರಣೆ ಗಗನಕ್ಕೆ ಏರಿತ್ತು. ಕಾಫಿ ನಾಡಿನಲ್ಲಿ ರೋಮಾಂಚನ ಮೂಡಿಸಿತ್ತು. ಕಾಫಿ ತೋಟಗಳಲ್ಲಿ ಸಂಚಲನ ಮೂಡಿ ಕಣ, ಗೋಡೌನ್ನಂತಹ ಶಾಶ್ವತ ಕಾಮಗಾರಿಗಳು, ಪೈಪ್ಲೈನ್, ಕೆರೆ ಕೆಲಸವೂ ನಡೆದಿತ್ತು. ಅನೇಕ ಬೆಳೆಗಾರರು ದುಬಾರಿ ಕಾರು, ಜೀಪು ಮತ್ತು ತೋಟಕ್ಕೆ ಬೇಕಾದ ವಾಹನ, ಯಂತ್ರ ಖರೀದಿ ಮಾಡಿದ್ದರು.
ಮಳೆಗಾಲದಲ್ಲಿ ಉಳಿದ ಕಾಫಿಯನ್ನು ಗರಿಷ್ಟ ಬೆಲೆಗೆ ಮಾರಾಟ ಮಾಡಿ ಇನ್ನಷ್ಟು ಅಭಿವೃದ್ಧಿ ಕೆಲಸ ಕೈಗೊಳ್ಳಲು ಬೆಳೆಗಾರರು ಕಾತರಿಸಿದ್ದರು. ಇದೀಗ ಕಾಫಿ ಬೆಲೆ ಇಳಿಕೆಯ ಹಾದಿ ಹಿಡಿದಿರುವುದು ಎಲ್ಲರಿಗೂ ನಿರಾಶೆ ತಂದಿದೆ.
ನಾವು ಈವರೆಗೆ ಶೇ.30 ಕಾಫಿ ಮಾತ್ರ ಮಾರಾಟ ಮಾಡಿದ್ದೆವು. ಉಳಿದ ಕಾಫಿ ಮಾರಾಟ ಮಾಡಲು ಇನ್ನೂ ಹೆಚ್ಚಿನ ಬೆಲೆಗಾಗಿ ಕಾದಿದ್ದೆವು. ಆದರೆ ಈಗ ಬೆಲೆ ಕಡಿಮೆ ಆಗುತ್ತಿದೆ. ಈಗ ಮತ್ತೆ ಶೇ.30 ಕಾಫಿ ಮಾರಾಟ ಮಾಡಿ ಉಳಿದ ಕಾಫಿಗೆ ಬೆಲೆ ಏರಲು ಕಾಯುತ್ತೇವೆ ಎಂದು ಹಿರಿಯ ಬೆಳೆಗಾರರೊಬ್ಬರು ತಿಳಿಸಿದರು.
ಕಾಫಿ ಬೆಲೆ ಅತಿ ವೇಗದಲ್ಲಿ ಏರಿದ್ದರಿಂದ ಅಷ್ಷೇ ವೇಗದಲ್ಲಿ ಕಡಿಮೆ ಆಗುತ್ತಿದೆ.ಆದರೆ ಚೀಲಕ್ಕೆ ಕನಿಷ್ಟ 10 ಸಾವಿರದ ಆಸುಪಾಸಿನಲ್ಲಿ ಧಾರಣೆ ನಿಲ್ಲಬಹುದು ಎಂಬ ಆಶಾಭಾವನೆ ಇದೆ ಎಂದು ಯುವ ಬೆಳೆಗಾರರು ಲೆಕ್ಕಾಚಾರ ಹಾಕುತ್ತಿದ್ದಾರೆ.
ವಿಯೆಟ್ನಾಂ ಮತ್ತು ಬ್ರೆಜಿಲ್ ದೇಶದಲ್ಲಿ ಮುಂದಿನ ಸಾಲಿನಲ್ಲಿ ಫಸಲು ಹೆಚ್ಚಬಹುದು ಎಂಬ ಅಂದಾಜಿನ ಆಧಾರದಲ್ಲಿ ಬೆಲೆ ಇಳಿಕೆ ಆಗುತ್ತಿದೆ. ಜೊತೆಗೆ ಮಾರುಕಟ್ಟೆಗೆ ಹೆಚ್ಚು ಉತ್ಪನ್ನ ಬರುತ್ತಿರುವುದು ಕೂಡ ಬೆಲೆ ಇಳಿಕೆಗೆ ಕಾರಣ ಆಗಿದೆ.
ಕಾಫಿ ಮಾರುಕಟ್ಟೆ ಬಹಳ ಸಂಕೀರ್ಣವಾದುದು.ಅಷ್ಟು ಸುಲಭದಲ್ಲಿ ಕುಸಿಯುವ ಸಾಧ್ಯತೆ ಕಡಿಮೆ. ಮುಂದೆ ಬೇಡಿಕೆ ಹೆಚ್ಚಾದಾಗ ಮತ್ತೆ ಬೆಲೆ ಏರುತ್ತದೆ. ಅಲ್ಲಿವರೆಗೂ ಕಾಯಬೇಕು ಅಷ್ಟೇ ಎಂದು ಮಾರುಕಟ್ಟೆ ಪಂಡಿತರು ಹೇಳುತ್ತಾರೆ.
