ರವಿ ಕೆಳಂಗಡಿ
ಕಳಸ:ಕೇಂದ್ರ ಸರ್ಕಾರವು ಪ್ರಕಟಿಸಿರುವ ಪರಿಸರ ಸೂಕ್ಮ ಪ್ರದೇಶಗಳ ಕರಡು ಪಟ್ಟಿಯಲ್ಲಿ ಕಳಸ ತಾಲ್ಲೂಕಿನ 5 ಗ್ರಾಮಗಳ ಹೆಸರು ಇರುವುದು ಅಲ್ಲಿನ ನಿವಾಸಿಗಳಲ್ಲಿ ಗೊಂದಲ ಹಾಗೂ ಆತಂಕ ಮೂಡಿಸಿದೆ.
ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವತಿಯಿಂದ ಹೊರಡಿಸಿರುವ ಪರಿಸರ ಸೂಕ್ಮ ವಲಯದ ಕರಡು ಅಧಿಸೂಚನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ 137 ಗ್ರಾಮಗಳು ಸೇರಿವೆ. ಇದರಲ್ಲಿ ಕಳಸ ತಾಲ್ಲೂಕಿನ 5 ಗ್ರಾಮಗಳಾದ ಹೊರನಾಡು, ಇಡಕಿಣಿ, ಕಳಕೋಡು, ಸಂಸೆ, ತನೂಡಿ ಕೂಡ ಸ್ಥಾನ ಪಡೆದಿದೆ.ಈ ಗ್ರಾಮಗಳಲ್ಲಿ ನೂರಾರು ವಾಸದ ಮನೆಗಳು, ಸಾವಿರಾರು ಎಕರೆ ಕೃಷಿ ಭೂಮಿ ಇದೆ.
ಇದರಿಂದಾಗಿ ಭವಿಷ್ಯದಲ್ಲಿ ತಮ್ಮ ಗ್ರಾಮಗಳಲ್ಲಿ ಯಾವ ಕಟ್ಟುಪಾಡುಗಳು ವಿಧಿಸಲ್ಪಡುತ್ತವೆ ಎಂದು ಕೃಷಿಕರು ಮತ್ತು ಇತರೆ ನಿವಾಸಿಗಳು ಚಿಂತಿತರಾಗಿದ್ದಾರೆ. ಈ ಕರಡು ಅಧಿಸೂಚನೆಗೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಲು 60 ದಿನಗಳ ಗಡುವು ಇದೆ. ಇದೀಗ ಈ ಇಎಸ್ಝೆಡ್ ಪ್ರದೇಶದಲ್ಲಿ ಹೇರಬಹುದಾದ ಕಾನೂನುಗಳು ಮತ್ತು ನಿಯಮಾವಳಿಗಳ ಬಗ್ಗೆ ಸ್ಥಳೀಯರಲ್ಲಿ ಗೊಂದಲಗಳು ಶುರು ಆಗಿದೆ,
ಕರಡು ಅಧಿಸೂಚನೆಯ ಪ್ರಕಾರ ಈಗ ಚಾಲ್ತಿಯಲ್ಲಿರುವ ಕೃಷಿ, ತೋಟಗಾರಿಕೆ ಹಾಗೂ ವಾಸದ ಮನೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಹೊಸದಾಗಿ ಕಲ್ಲು, ಮರಳಿನ ಗಣಿಗಾರಿಕೆ, ದೊಡ್ಡ ಕಟ್ಟಡ ನಿರ್ಮಾಣ ಮತ್ತು ಕೆಂಪು ವರ್ಗದ ಕೈಗಾರಿಕೆಗಳಿಗೆ ನಿರ್ಭಂಧ ವಿಧಿಸುವ ಉದ್ದೇಶ ಹೊಂದಲಾಗಿದೆ.
‘ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯಿಂದಾಗಿ ವಾಣಿಜ್ಯ ಕೃಷಿಕರಲ್ಲಿ ರಾಸಾಯನಿಕಗಳ ಬಳಕೆ ಮೇಲೆ ನಿರ್ಬಂಧ ಬರಬಹುದು. ಜೊತೆಗೆ ಪ್ರವಾಸೋದ್ಯಮಕ್ಕೆ ಪೂರಕವಾದ ರೆಸಾರ್ಟ್ ಮತ್ತಿತರ ವ್ಯವಹಾರ ಮಾಡಲು, ಚಾರಣ ಮತ್ತಿತರ ಚಟುವಟಿಕೆ ನಡೆಸಲು ಕೂಡ ಅಡ್ಡಿ ಆಗಬಹುದು ಎಂಬ ಅಭಿಪ್ರಾಯ ಹೋಂಸ್ಟೇ ಮಾಲೀಕರು ಆದ ಜೆಡಿಎಸ್ ರಾಜ್ಯ ಘಟಕದ ಉಪಾದ್ಯಕ್ಷ ಹೆಚ್.ಡಿ.ಜ್ವಾಲನಯ್ಯ ಅವರದು.
‘ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿರ್ಬಂಧಗಳು ಹೆಚ್ಚಿದಂತೆ ಹಣಕಾಸು ವಹಿವಾಟು ಕಡಿತಗೊಂಡು ಉದ್ಯೋಗಾವಕಾಶಗಳು ಕ್ಷೀಣಿಸುವ ಅಪಾಯವೂ ಇದೆ. ಈ ಗ್ರಾಮಗಳಲ್ಲಿ ಇರುವ ಕೃಷಿ ಭೂಮಿಯ ವಾಣಿಜ್ಯ ಮೌಲ್ಯ ಕೂಡ ಕಡಿತ ಆಗುವ ಸಾಧ್ಯತೆ ಇದೆ’ ಎಂದು ಕೃಷಿಕ ಪ್ರಮೋಧ್ ಭಾರತಿಪುರ ಅಭಿಪ್ರಾಯಪಡುತ್ತಾರೆ.
ಆದರೆ ಕರಡು ಅಧಿಸೂಚನೆಯಲ್ಲಿ ಹೆಸರಿಸಲಾಗಿರುವ ಯಾವುದೇ ಗ್ರಾಮವನ್ನು ಕಡ್ಡಾಯವಾಗಿ ಪರಿಸರ ಸೂಕ್ಷ್ಮ ಪ್ರ ದೇಶ ಎಂದು ಘೋಷಿಸಲಾಗುತ್ತದೆ ಎಂದರ್ಥವಲ್ಲ. ಸ್ಥಳೀಯ ನಿವಾಸಿಗಳು, ಕೃಷಿಕರು, ಜನಪ್ರತಿನಿಧಿಗಳು, ಸ್ಥಳೀಯ ಅಡಳಿತ ಸಂಸ್ಥೆಗಳಾದ ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಸಂಘಟನೆಗಳು ಈ ಕರಡು ಅಧಿಸೂಚನೆಗೆ ತಮ್ಮ ಆಕ್ಷೇಪಣೆ ಮತ್ತು ತಿದ್ದುಪಡಿಗಳನ್ನು ಸೂಚಿಸಲು ಅವಕಾಶ ಇದೆ.ಈ ಅಭಿಪ್ರಾಯಗಳನ್ನು ಪರಿಶೀಲಿಸಿದ ನಂತರವಷ್ಟೇ ಅಂತಿಮ ಅಧಿಸೂಚನೆ ಪ್ರಕಟಿಸಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.
ಆಕ್ಷೇಪಣೆ ಸಲ್ಲಿಸಲು ಬಯಸುವವರು 60 ದಿನದ ಒಳಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯದ ಕಾರ್ಯದರ್ಶಿಗೆ ಲಿಖಿತ ರೂಪದಲ್ಲಿ ಅಥವಾ ಈ ಮೇಲ್ ಮೂಲಕ ಸಲ್ಲಿಸಬಹುದು.
