ಕಳಸ:ಸಂಸೆ ಗ್ರಾಮದ ಬಸರೀಕಲ್ಲು ಪ್ರದೇಶದಲ್ಲಿ ಭಾನುವಾರ ನಡೆದ ಭೂಕುಸಿತದಿಂದಾಗಿ ಬಡ ಕುಟುಂಬವೊಂದು ಒಂದು ಎಕರೆಗೂ ಹೆಚ್ಚು ಕಾಫಿ, ಅಡಿಕೆ ತೋಟವನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ.
ಭಾನುವಾರ ಬೆಳಿಗ್ಗೆ 10 ಗಂಟೆ ವೇಳೆಗೆ ಕೃಷ್ಣಪ್ಪ ದಂಪತಿ ತೋಟದಲ್ಲಿ ಇದ್ದಾಗಲೇ ಕಲ್ಲುಗಳು ಉರುಳಲಾರಂಭಿಸಿದವು. ಆಗ ಅಪಾಯ ಅರಿತ ದಂಪತಿ ಅಲ್ಲಿಂದ ಓಡಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಸುಮಾರು 1 ಎಕರೆಯಷ್ಟು ತೋಟ ಭೂಕುಸಿತದಿಂದ ಜರಿದು ಬಿದ್ದಿದೆ.

ಭೂಕುಸಿತದಿಂದಾಗಿ ನೂರಾರು ಕಾಫಿ, ಅಡಿಕೆ, ಕಾಳುಮೆಣಸು ಮತ್ತು ಏಲಕ್ಕಿ ಗಿಡಗಳು ನಾಶವಾಗಿದೆ. 2 ಎಕರೆ ಕೃಷಿ ಭೂಮಿ ಹೊಂದಿರುವ ಈ ಕುಟುಂಬದ ಅರ್ಧದಷ್ಟು ಭೂಮಿ ಮಣ್ಣುಪಾಲು ಆಗಿರುವುದರಿಂದ ಕುಟುಂಬ ಕಂಗಾಲಾಗಿದೆ.
‘ನಾವು 40 ವರ್ಷದಿಂದ ಸಾಕಿದ್ದ ಕಾಫಿ, ಅಡಿಕೆ ಗಿಡಗಳೆಲ್ಲ ಮಣ್ಣಿನ ಒಳಗೆ ಹೂತುಹೋಗಿವೆ. ನಮಗೆ ಕುಡಿಯಲು ನೀರು ಕೂಡ ಸಿಗುತ್ತಿಲ್ಲ. ಏನು ಮಾಡಬೇಕು ಎಂದು ದಿಕ್ಕು ತೋಚುತ್ತಿಲ್ಲ’ ಎಂದು ಕೃಷಿಕ ಕೃಷ್ಣಪ್ಪ ದುಃಖದಿಂದ ಹೇಳಿದರು.

‘ಜರಿದಿರುವ ಒಂದು ಎಕರೆ ತೋಟದಲ್ಲಿ ಒಳ್ಳೆ ಅಡಿಕೆ, ಕಾಫಿ ಫಸಲು ಇತ್ತು. ತೋಟದಲ್ಲೀ ಈಗಲೂ ಮಣ್ಣು ಜರಿಯುತ್ತಿದೆ. ನಮಗೆ ಸರ್ಕಾರ ಪರಿಹಾರ ಕೊಡಬೇಕು. ನೆನ್ನೆ ನಮ್ಮ ಜೀವ ಉಳಿದಿದ್ದೇ ಅದೃಷ್ಟ ‘ ಎಂದು ಕೃಷ್ಣಪ್ಪ ಅವರ ಪತ್ನಿ ಸುಶೀಲಾ ಕಣ್ಣೀರು ಹಾಕಿದರು.
