ಕಳಸ:ತಾಲ್ಲೂಕಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದಷ್ಟೂ ಹೋಟೆಲ್ ಮತ್ತು ಹೋಂಸ್ಟೇ ಮಾಲೀಕರ ವಿರುದ್ಧ ಕೆಲ ಸಾರ್ವಜನಿಕರು ಪರೋಕ್ಷವಾಗಿ ಕಿಡಿ ಕಾರುತ್ತಾರೆ. ಪ್ಲಾಸ್ಟಿಕ್ ಕಸವು ಪ್ರಮುಖವಾಗಿ ಪ್ರವಾಸಿಗರಿಂದಲೇ ಹೆಚ್ಚುತ್ತಿದೆ ಎಂಬ ದೂರಿನಲ್ಲಿ ಸತ್ಯಾಂಶವೂ ಇದೆ.
ಈ ಕಳಂಕ ನಿವಾರಿಸಲೋ ಎಂಬಂತೆ ಕಳಸ ಟೂರಿಸಂ ಫೋರಂ ತಾಲ್ಲೂಕಿನ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರತಿವಾರ ಸ್ವಚ್ಛತಾ ಅಭಿಯಾನ ನಡೆಸುತ್ತಿದೆ. ಕಳೆದ ವಾರ ಗಾಳಿಗುಡ್ಡದಲ್ಲಿ ಸ್ವಚ್ಛತೆ ನಡೆಸಿದ್ದ ಈ ತಂಡ ಇಂದು ಮೈದಾಡಿ ಗುಡ್ಡದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಮಾಡಿದೆ.
ಮೈದಾಡಿ ಗುಡ್ಡದ ವೀಕ್ಷಣಾ ತಾಣದಲ್ಲಿ ಹೋಂಸ್ಟೇ ಮಾಲೀಕರು ಮತ್ತು ಸ್ಥಳೀಯರು ಒಡಗೂಡಿ ಪ್ಲಾಸ್ಟಿಕ್ ಕಸವನ್ನು ಹೆರಕಿ ಸ್ವಚ್ಛತೆ ಬಗ್ಗೆ ಕಾಳಜಿ ತೋರಿದರು.ದಿನವಿಡೀ ಸ್ವಚ್ಛತಾ ಅಭಿಯಾನ ನಡೆಸಿ ಪ್ರವಾಸಿ ತಾಣಗಳ ಸಂರಕ್ಷಣೆಗೆ ಪಣ ತೊಟ್ಟರು.
ಕಳಸ ಟೂರಿಸಂ ಫೋರಮ್ನ ಇಗ್ನೇಷಿಯಸ್ ಸಂದೇಶ್ ಮಾತನಾಡಿ, ಮೈದಾಡಿಯಲ್ಲಿ ಪ್ರವಾಸಿಗರು ಆಹಾರ ಸೇವಿಸಿದ ನಂತರ ಪ್ಲಾಟಿಕ್ ಮತ್ತು ನೀರಿನ ಬಾಟಲಿ ಎಸೆದು ಹೋಗುತ್ತಿದ್ದಾರೆ. 2 ದಿನಗಳ ಕಾಲ ಹೋಂಸ್ಟೇ ಮಾಲೀಕರು ಮತ್ತು ಸ್ಥಳೀಯರು ಸ್ವಚ್ಛಗೊಳಿಸಿದ್ದಾರೆ. ಪ್ರವಾಸಿಗರಲ್ಲಿ ಈ ಬಗ್ಗೆ ಅರಿವು ಮೂಡಿಸದಿದ್ದರೆ ಪ್ರತಿ ಬಾರಿ ಸ್ಥಳೀಯರೇ ಕಸ ಹೆರಕುವ ಸ್ಥಿತಿ ಬರುತ್ತದೆ ಎಂದರು.
ಮೈದಾಡಿ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಘೋಷಣೆ ಮಾಡಬೇಕು. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಪ್ಲಾಸ್ಟಿಕ್ ಮತ್ತು ನೀರಿನ ಬಾಟಲ್ ಒಳಗೆ ತರದಂತೆ ನಿರ್ಬಂಧ ವಿಧಿಸಬೇಕು. ಈ ಬಗ್ಗೆ ಸ್ಥಳೀಯ ಪಂಚಾಯಿತಿ, ಅರಣ್ಯ ಇಲಾಖೆ ಒಗ್ಗೂಡಿ ನಿಯಮಾವಳಿ ರೂಪಿಸಬೇಕು ಎಂದರು.

ಕಳಸ ಟೂರಿಸಂ ಫೋರಂ ಸದಸ್ಯ ಸಂಪತ್ ಮಾತನಾಡಿ, ಅಗತ್ಯವಿರುವಲ್ಲಿ ಹೊಸದಾಗಿ ಕಸದ ತೊಟ್ಟಿ ಇರಿಸಬೇಕು. ಕಸವನ್ನು ನಿಯಮಿತವಾಗಿ ವಿಲೇವಾರಿ ಮಾಡುವ ಬಗ್ಗೆಯೂ ಸ್ಥಳೀಯ ಪಂಚಾಯಿತಿ ಅಗತ್ಯ ಕ್ರಮ ವಹಿಸಬೇಕಾಗಿದೆ ಎಂದರು.
ಮೈದಾಡಿ ಗುಡ್ಡಕ್ಕೆ ವಾಹನಗಳು ಪ್ರವೇಶಿಸದಂತೆ ತಡೆದು ಮುಖ್ಯ ರಸ್ತೆ ಪಕ್ಕದಲ್ಲೇ ವಾಹನ ನಿಲುಗಡೆಗೆ ಸ್ಥಳ ನಿಗದಿಪಡಿಸುವ ಬಗ್ಗೆ ಅರಣ್ಯ ಇಲಾಖೆ ಜೊತೆ ಮಾತುಕತೆ ನಡೆಸಬೇಕಿದೆ ಎಂದೂ ಸಂಪತ್ ಹೇಳಿದರು.
ಸಮಿತಿಯ ಸಂಚಾಲಕ ಚಂದ್ರಮೋಹನ್ ಮಾತನಾಡಿ, ಮೈದಾಡಿಗೆ ಬರುವ ಕೆಲ ಪ್ರವಾಸಿಗರು ಸದ್ದು ಗದ್ದಲ ಮಾಡಿ ಇಲ್ಲಿನ ನಿರ್ಮಲ ವಾತಾವರಣ ಹಾಳು ಮಾಡುತ್ತಿದ್ದಾರೆ. ತ್ಯಾಜ್ಯಗಳನ್ನು ಎಸೆದು ಹೋಗುತ್ತಿದ್ದಾರೆ. ಇಂತಹ ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕಬೇಕಿದೆ ಎಂದರು.
ಕಳಸ ತಾಲ್ಲೂಕಿನ ಅನೇಕ ಪ್ರದೇಶಗಳು ರಾಜ್ಯದಲ್ಲೇ ಅತ್ಯಂತ ಪ್ರಮುಖ ಪ್ರವಾಸಿ ತಾಣಗಳಾಗಿ ಗುರುತಿಸಿಕೊಳ್ಳುತ್ತಿದೆ. ಇಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡಿದರೆ ಮಾತ್ರ ಪ್ರವಾಸೋದ್ಯಮ ಇನ್ನಷ್ಟು ಬೆಳೆಯುತ್ತದೆ. ಇದರಿಂದ ಹೋಂಸ್ಟೇ, ಹೋಟೆಲ್, ಜೀಪ್ ಮಾಲೀಕರ ಜೊತೆಗೆ ಸ್ಥಳೀಯ ಆರ್ಥಿಕತೆಗೂ ದೊಡ್ಡ ಅನುಕೂಲ ಸಿಗಲಿದೆ ಎಂದರು.
ಕಳಸ ಟೂರಿಸಂ ಫೋರಂ ಸದಸ್ಯರಾದ ಪ್ರಸನ್ನ, ಸುಜನ್, ಸುಜಿತ್ ಬೆಳ್ಳ, ಉದಯ್ ಶೆಟ್ಟಿ, ವಿಜೇತ್ ಮತ್ತಿತರರು ಭಾಗವಹಿಸಿದ್ದರು.
ಕಳಸ ಟೂರಿಸಂ ಫೋರಂ ಸದಸ್ಯರು ಮೈದಾಡಿ ಗುಡ್ಡದಲ್ಲಿ ಮಂಗಳವಾರ ಸ್ವಚ್ಛತಾ ಆಭಿಯಾನ ನಡೆಸಿದರು.
