ಕಳಸ ಮತ್ತು ಮೂಡಿಗೆರೆ ತಾಲ್ಲೂಕಿನ 54 ಪ್ರದೇಶದಲ್ಲಿ ಒಟ್ಟು 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಹೈ ಮಾಸ್ಟ್ ದೀಪಗಳನ್ನು ಅಳವಡಿಸಲಾಗಿದ್ದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.
ಕಳಸ ಪಟ್ಟಣದ ಕಳಸೇಶ್ವರ ದೇವಸ್ಥಾನ, ಪೊಲೀಸ್ ಠಾಣೆ, ಮಂಜಿನಕಟ್ಟೆ ಮತ್ತು ಮಹಾವೀರ ರಸ್ತೆಯಲ್ಲಿ ತಲಾ 5 ಲಕ್ಷ ವೆಚ್ಚದಲ್ಲಿ ದೀಪಗಳನ್ನು ಅಳವಡಿಸಲಾಗಿದೆ.ಇದರಿಂದ ಪಟ್ಟಣದಲ್ಲಿ ರಾತ್ರಿಯಿಡೀ ಬೆಳಕಿನ ಚಿತ್ತಾರವೇ ಮೂಡಿದಂತಾಗಿದೆ.
ಪ್ರವಾಸಿ ಕೇಂದ್ರವಾಗಿ ಗುರುತಿಸಿಕೊಂಡಿರುವ ಸಂಸೆ ಹಾಗೂ ಕುದುರೆಮುಖದಲ್ಲೂ ಹೈ ಮಾಸ್ಟ್ ದೀಪ ಅಳವಡಿಸಿರುವುದು ಪ್ರವಾಸಿಗರಿಗೆ ಸುರಕ್ಷತಾ ಭಾವನೆ ಮೂಡಿಸುತ್ತದೆ. ಇದರೊಂದಿಗೆ ಗ್ರಾಮೀಣ ಪ್ರದೇಶವಾದ ಹಿರೇಬೈಲ್ ಹಾಗೂ ಬಾಳೆಹೊಳೆಯಲ್ಲೂ ಹೈ ಮಾಸ್ಟ್ ದೀಪ ಅಳವಡಿಸಲಾಗಿದೆ. ಅಪ್ರತಿಮ ಬೆಳಕನ್ನು ಕಂಡ ಗ್ರಾಮಸ್ಥರು ಖುಷಿಯಾಗಿದ್ದು ಶಾಸಕಿ ನಯನಾ ಮೋಟಮ್ಮ ಅವರ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಮೂಡಿಗೆರೆ ಕ್ಷೇತ್ರದಾದ್ಯಂತ ಹೈಮಾಸ್ಟ್ ದೀಪಗಳ ಅಳವಡಿಕೆ ನಡೆಯುತ್ತಿದ್ದು ಕತ್ತಲಲ್ಲಿ ಮುಳುಗಿದ್ದ ಗ್ರಾಮಗಳು ಝಗಮಗಿಸುವಂತಾಗಿದೆ. ಮುಖ್ಯ ಮಂತ್ರಿಗಳ ವಿಶೇಷ ನಿಧಿಯಿಂದ ಈ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದ್ದು ಮೂಡಿಗೆರೆ ಕ್ಷೇತ್ರದಲ್ಲಿ ಒಟ್ಟು 54 ಕಡೆಗಳಲ್ಲಿ 2.5 ಕೋಟಿ ವೆಚ್ಚದಲ್ಲಿ ಈ ಮಹತ್ವಾಕಾಂಕ್ಷೆಯ ಕಾಮಗಾರಿ ಮುಗಿಸಲಾಗಿದೆ ಎಂದು ಶಾಸಕಿ ನಯನಾ ಮೋಟಮ್ಮ ಮಾಹಿತಿ ನೀಡಿದ್ದಾರೆ.
ತಮ್ಮ ಕ್ಷೇತ್ರದ ಮೂಲ ಸೌಲಭ್ಯದ ಅಭಿವೃದ್ಧಿಗೆ ಶಾಸಕಿ ನಯನಾ ಮೋಟಮ್ಮ ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಹೈ ಮಾಸ್ಟ್ ದೀಪಗಳ ಅಳವಡಿಕೆಯಿಂದ ಗ್ರಾಮೀಣ ಪ್ರದೇಶದಲ್ಲೆಲ್ಲಾ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ಸುರಕ್ಷತಾ ಭಾವನೆ ಬಂದಿದೆ ಎಂದು ಕಾಂಗ್ರೆಸ್ ಮುಖಂಡ ಸುಜಿತ್ ಬೆಳ್ಳ ಅಭಿಪ್ರಾಯಪಡುತ್ತಾರೆ.
ಪ್ರತಿ ಹೈಮಾಸ್ಟ್ ದೀಪಕ್ಕೆ ತಲಾ 5 ಲಕ್ಷ ರೂಪಾಯಿಯಂತೆ ದೊಡ್ಡ ಮಟ್ಟದ ಅನುದಾನ ತಂದು ಇಡೀ ಮೂಡಿಗೆರೆ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಬೆಳಕಿನ ವ್ಯವಸ್ಥೆ ಮಾಡಿದ ಶಾಸಕಿ ನಯನಾ ಮೋಟಮ್ಮ ಅವರನ್ನು ಕಾಂಗ್ರೆಸ್ ಮುಖಂಡ ವೀರೇಂದ್ರ ಅಭಿನಂದಿಸಿದ್ದಾರೆ.
