ಕಳಸ:ಬಣಕಲ್ ಮೂಲದ ವ್ಯಕ್ತಿಯೊಬ್ಬರು ಕಳಸ ಸಮೀಪದ ಕಾಫಿ ತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ವಾರ ಹಳುವಳ್ಳಿ ಬಳಿಯ ಕೊಂಡದಮನೆಯ ರಸ್ತೆ ಪಕ್ಕದಲ್ಲಿ ದ್ವಿಚಕ್ರ ವಾಹನವೊಂದು ಪತ್ತೆಯಾಗಿತ್ತು. ಅದರ ಜಾಡು ಅರಸಿದ ಕಳಸ ಪೊಲೀಸರಿಗೆ ಅದು ಬಣಕಲ್ ಮೂಲದ ಹೆಚ್.ಎಂ.ಸತೀಶ್(62) ಅವರಿಗೆ ಸೇರಿದ ವಾಹನ ಎಂದು ಪತ್ತೆಯಾಗಿತ್ತು. ಬಣಕಲ್ ಸಮೀಪದಿಂದ ಅವರು ನಾಪತ್ತೆ ಆಗಿದ್ದಾರೆಂದು ಅವರ ಕುಟುಂಬಸ್ಥರು ದೂರು ನೀಡಿದ್ದರು.

ಕುಟುಂಬದಿಂದ ದೂರಾಗಿದ್ದ ಸತೀಶ್ ಬೇರೆ ಕಡೆ ಕೆಲಸ ಮಾಡುತ್ತಿದ್ದರು. 2 ತಿಂಗಳ ಹಿಂದೆ ಬಣಕಲ್ ಸುಭಾಷ್ ನಗರದ ಮನೆಗೆ ಭೇಟಿ ನೀಡಿ ಮತ್ತೆ ಕೆಲಸಕ್ಕೆಂದು ಹೋಗಿದ್ದರು ಎನ್ನಲಾಗಿದೆ.
ಭಾನುವಾರ ಬೆಳಿಗ್ಗೆ ಕೊಂಡದಮನೆಯ ರವೀಂದ್ರ ಭಟ್ ಅವರ ತೋಟದಲ್ಲಿ ಸತೀಶ್ ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ಕೊಳೆತಿದ್ದ ಶವವನ್ನು ಬಣಕಲ್ನ ಸಮಾಜ ಸೇವಕ ಆರಿಫ್ ನೆರವಿನಿಂದ ಇಳಿಸಲಾಯಿತು. ಆನಂತರ ಶವವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಯಿತು.
